Thursday, 29 June 2017

ಇಲ್ಲಿ ಹೋರಿಗಳೂ ಜಿಮ್ ಮಾಡ್ತಾವೆ!

 


ಇತ್ತೀಚೆಗಂತೂ ಯಂಗ್ ಜನರೇಷನ್ನಲ್ಲಿ ಸಿಕ್ಸ್ತ್ ಪ್ಯಾಕ್ ಬಗ್ಗೆ ಇನ್ನಿಲ್ಲದ ಕ್ರೇಜ್ ಇದೆ. ಇದಕ್ಕಾಗಿ ದಿನಕ್ಕೆ 2-3 ಗಂಟೆಗಳ ಕಾಲ ವರ್ಕ್ಔಟ್ ಮಾಡ್ತಾರೆ. ಬಾಡಿ ಬಿಲ್ಡಪ್ಗಾಗಿಯೇ ಅನೇಕ ಆಧುನಿಕ ಜಿಮ್ಗಳೂ ಈಗ ದಿನೇದಿನೇ ಜಾಸ್ತಿ ಆಗ್ತಿವೆ. ಅಷ್ಟೇ ಅಲ್ಲ, ಏರೋಬಿಕ್ಸ್, ಹೀಟ್ಯೋಗ.. ನೂಡ್ಯೋಗ... ಹೀಗೆ ತಮ್ಮ ಅಂಗಸೌಷ್ಠವ ಕಾಪಾಡಿಕೊಳ್ಳೋಕೆ ಯುವಜನತೆ ಹತ್ತು ಹಲವು ಕಸರತ್ತುಗಳನ್ನು ಮಾಡ್ತಾರೆ.

ಇದರಲ್ಲೇನು ವಿಶೇಷ ಅಂತ ನೀವು ಕೇಳಬಹುದು. ಯಂಗ್ ಜನರೇಷನ್ ಜಿಮ್ಗಳಲ್ಲಿ ವರ್ಕ್ಔಟ್ ಮಾಡೋದು ಹೊಸ ವಿಚಾರವೇನೂ ಅಲ್ಲ ಬಿಡಿ, ಆದ್ರೆ ತಮ್ಮ ಅಂಗಸೌಷ್ಠವ ಕಾಪಾಡಿಕೊಳ್ಳೋಕೆ ಹೋರಿಗಳೂ ಜಿಮ್ ಮಾಡ್ತಾವೆ ಅಂದ್ರೆ ನೀವು ನಂಬಲೇಬೇಕು! ಹೌದು, ಆಂಧ್ರದ ಕರ್ನೂಲ್ನಲ್ಲಿರೋ ರಾಷ್ಟ್ರೀಯ ಡೈರಿ ರೀಸರ್ಚ್ ಇನ್ಸ್ಸ್ಟಿಟ್ಯೂಟ್ನಲ್ಲಿರೋ ಹೋರಿಗಳು ಮತ್ತು ಕೋಣಗಳು ವಾರಕ್ಕೆ 2 ಗಂಟೆಗಳ ಕಾಲ ತಮ್ಮ ಮೈ ದಂಡಿಸಿ, ಬೆವರಿಸಲೇಬೇಕು!

ಹೋರಿ, ಎಮ್ಮೆಗಳಿಗೂ ವ್ಯಾಯಾಮ ಮಾಡಿಸೋ ಕರ್ನೂಲ್ ರಾಷ್ಟ್ರೀಯ ಡೈರಿ ರೀಸರ್ಚ್ ಇನ್ಸ್ಸ್ಟಿಟ್ಯೂಟ್ ಸ್ಪೆಷಾಲಿಟಿಯ ಬಗ್ಗೆಯೂ ಸ್ವಲ್ಪ ನಿಮಗೆ ಹೇಳಬೇಕು. ಅಂದಹಾಗೆ ಇಲ್ಲಿ ವಿಶೇಷವಾಗಿ ಹಸು, ಎಮ್ಮೆ, ಮೇಕೆ, ಕುರಿಗಳ ವಿಶೇಷ ತಳಿಗಳನ್ನು ಸೃಷ್ಟಿಸಲಾಗ್ತಿದೆ.

ನಿಮಗೆ ನೆನಪಿರಬಹುದು, ಎಡಿನ್ಬರ್ಗ್ ಯುನಿವರ್ಸಿಟಿಯ ವಿಜ್ಞಾನಿಗಳು 1996ರಲ್ಲಿ ತದ್ರೂಪಿ ಕುರಿಯೊಂದನ್ನು ಸೃಷ್ಟಿಸಿದ್ರು. ವಿಶ್ವದ ಮೊದಲ ಕ್ಲೋನಿಂಗ್ ಕುರಿಮರಿಗೆ `ಡಾಲಿಅಂತಲೂ ಹೆಸರಿಟ್ಟಿದ್ರು. ಡಾಲಿ ಅನ್ನೋ ಕ್ಲೋನಿಂಗ್ ಕುರಿ ಮರಿಯ ಬಗ್ಗೆ ಸಾಕಷ್ಟು ಪರ-ವಿರೋಧದ ಹೇಳಿಕೆಗಳೂ ಆಗ ಕೇಳಿಬಂದಿದ್ವು. ಇದೇ ಕಾರಣಕ್ಕೆ `ಡಾಲಿವಿಶ್ವದಾದ್ಯಂತ ಸಾಕಷ್ಟು ಹೆಸರಾಗಿತ್ತು.

ಆದ್ರೆ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ, ವಿಶ್ವದ ಮೊದಲ ಕ್ಲೋನಿಂಗ್ ಎಮ್ಮೆ ಕರು ಸೃಷ್ಟಿಸಿದ್ದು ಕರ್ನೂಲ್ ಇಂಡಿಯನ್ ಡೈರಿ ರೀಸರ್ಚ್ ಇನ್ಸ್ಸ್ಟಿಟ್ಯೂಟ್ ವಿಜ್ಞಾನಿಗಳು!  ಹೌದು, 2009ರಲ್ಲಿ ಇಲ್ಲಿನ ವಿಜ್ಞಾನಿಗಳು, ಐವಿಎಫ್ ವಿಧಾನದ ಮೂಲಕ ವಿಶ್ವದ ಮೊದಲ ಕ್ಲೋನಿಂಗ್ ಎಮ್ಮೆ ಕರುವನ್ನು ಸೃಷ್ಟಿಸಿ ದಾಖಲೆ ನಿರ್ಮಿಸಿದ್ರು. ತಾವು ಸೃಷ್ಟಿಸಿದ ತದ್ರೂಪಿ ಎಮ್ಮೆ ಕರುವಿಗೆ `ಸಂಪುರಅಂತ ಹೆಸರಿಟ್ಟಿದ್ರು.

ಇಷ್ಟಕ್ಕೂ ಇಂಡಿಯನ್ ಡೈರಿ ರೀಸರ್ಚ್ ಇನ್ಸ್ಸ್ಟಿಟ್ಯೂಟ್ನಲ್ಲಿ ಯಾಕೆ ಹೋರಿಗಳು ಮತ್ತು ಕೋಣಗಳಿಗೆ  ವ್ಯಾಯಾಮ ಮಾಡ್ತಿಸ್ತಾರೆ. ಅಂದಹಾಗೆ, ಹೊಸ ಹೊಸ ತಳಿಗಳ ಸಂವರ್ಧನೆಗೆ ಆರೋಗ್ಯಕರ ಹಾಗೂ ಅತ್ಯುತ್ತಮ ವೀರ್ಯ ಬೇಕಾಗುತ್ತೆ.. ಹೀಗಾಗಿ ಇಲ್ಲಿನ ಹೋರಿಗಳು ಮತ್ತು ಕೋಣಗಳು ವಾರಕ್ಕೆ 2 ಗಂಟೆಗಳ ಕಾಲ ಮೈನಲ್ಲಿ ಬೆವರಿಳಿಸಲೇಬೇಕು!

ಹೋರಿಗಳು ಮತ್ತು ಕೋಣಗಳು ಜಿಮ್ ಮಾಡೋಕೆ ಅಂತಲೇ ಇನ್ಸ್ಸ್ಟಿಟ್ಯೂಟ್ನಲ್ಲಿ ವಿಶೇಷ ರೀತಿಯಲ್ಲಿ ವಿನ್ಯಾಸ ಮಾಡಿರೋ ಜಿಮ್ ಇದೆ! ಅನಿಮಲ್ ಜಿಮ್ನಲ್ಲಿ ಹೋರಿಗಳು ಮತ್ತು ಕೋಣಗಳು ವಾರಕ್ಕೆ ಎರಡು ಗಂಟೆ ವಾಕ್ ಮಾಡಲೇಬೇಕು.  ಹೀಗೆ ಜಿಮ್ನಲ್ಲಿ ಬೆವರಿಳಿಸುವ ಹೋರಿ ಮತ್ತು ಕೋಣಗಳಿಂದ ವಾರಕ್ಕೆರಡು ಬಾರಿ ವೀರ್ಯವನ್ನು ಸಂಗ್ರಹಿಸಿ, ತಳಿ ಅಭಿವೃದ್ಧಿಗೆ ಬಳಸಲಾಗುತ್ತೆ. 

Friday, 7 October 2016

ಕಾಣದ ದಾರಿಯಲಿ..


ಭ್ರಮೆಯ ಪರದೆ ಸರಿಸಿ ನೋಡು
ವಾಸ್ತವದ ಕನ್ನಡಿ
ಗುರಿ ಇರದ ದಾರಿಯಲಿ
ಹೊಸ ಬದುಕಿನ ಮುನ್ನುಡಿ
ಬರೆಯಲೇನು ಮರಳ ಬರಹ?
ಮರುಭೂಮಿಯ ನೆರಳದು!
ಕುಡಿಯಲೇನು ಮೃಗಜಲವಾ
ದಾಹ ನೀಗದು
ಹಿಡಿಯಲೇನು ಮನ ಪತಂಗ
ಮಕರಂದವ ಸವಿಯದು!
ಮಿಡಿವುದೇನು ಹರಿದ ತಂತಿ
ನಾದವೆಂದು ಕೇಳದು

Thursday, 29 September 2016

ಒಂಟಿತನದೃಷ್ಟಿಯೊಂದೇ ನೋಡುವ ಕಣ್ಣುಗಳೆರಡು
ಶಬ್ದವೊಂದೇ; ಕೇಳುವ ಕಿವಿಗಳೆರಡು
ಕೈಗಳೆರಡು; ನಡೆದಾಡುವ ಕಾಲುಗಳೂ ಎರಡು
ಕಾಲಿಗೂ ಜೋಡೆರಡು
ನಾಸಿಕ ಒಂದಾದರೂ ಉಸಿರೆಳೆವ ಹೊಳ್ಳೆಗಳೆರಡು
ಒಂದೇ ಶಿರದ ಕೇಶಗಳು ಸಹಸ್ರ ಸಹಸ್ರ
ದಂತದ ಇರುವೆಗಳು, ಸಾಲು ಸಾಲು!
ಬಾಯಿಯೋ ಏಕಾಂಗಿ!
ಅದರೊಳಗಿರುವ ನಾಲಿಗೆಯೂ ಒಬ್ಬಂಟಿ
ಭಗವಂತ ಅದೆಂಥ ಪಕ್ಷಪಾತಿ!
ನಾಲಿಗೆ, ಬಾಯಿಗೆ ಹೇಳಿತು
ನೀ ನನ್ನ ಜೋಡಿಯಾಗು
ಮುದ್ದಾದ ಮಾತು ಹುಟ್ಟಲಿ!
ಆಗ ನಮ್ಮಿಬ್ಬರ
ಒಂಟಿತನ ದೂರಾದೂರ!

Monday, 19 September 2016

ಕುಲವಾವುದಯ್ಯಾಕುಲವಾವುದಯ್ಯಾ
ನಿನ್ನ ಮೂಲವಾವುದಯ್ಯಾ?

ಸ್ವಚ್ಛ ಬಿಳಿಗೆಡ್ಡೆ ಮೈಯೆಲ್ಲಾ ಸುವಾಸನೆ
ಲಷುಣ ಕಂಡರೆ ಮೂಗು ಮುರಿಯುವ;
ಮಡಿಯುಟ್ಟು ಮಾರುದ್ಧ ಹಾರುವವ;
ಕಚ್ಚೆ ಕಟ್ಟದೆ; ಒದ್ದೆ ದಟ್ಟಿಯನುಟ್ಟು
ಮೂಗು ಹಿಡಿದು ಒಟಗುಟ್ಟಿದರೆ
ಕೈಗೆಟುಕುವುದೇ ಕೈಲಾಸ; ಕಾಣುವುದೇ ವೈಕುಂಠ?
ಲಲಾಟದಲ್ಲಿ ಉದ್ದುದ್ದ, ಅಡ್ಡಡ್ಡ ಗೆರೆ ಎಳೆದು
ಹರಿ-ಹರನಲ್ಲಿ ಭೇದವೆಣಿಸುವ ಮೂಢರೆಷ್ಟು
ಮುಕ್ತಿ ಪಡೆದರು?!

ಮಣ್ಣ ಮಡಿಲಲ್ಲಿ ಮಡಿ ಮಾಡಿ
ಮಹೌಷಧ ಬೆಳೆವ ಭೂತಾಯ ಒಕ್ಕಲು
ನೆಲವೆಂಬ ಲಲಾಟದಲಿ ನೇಗಿಲ ಗೆರೆ ಎಳೆದು
ನಾನು ನಾಮ; ನೀನು ವಿಭೂತಿ ಎಂದು
ಜರಿದುಕೊಳ್ಳುವ ಭಂಡರಿಗೆಲ್ಲ
ಅನ್ನವಿಕ್ಕುವವ ಕುಲಜನಲ್ಲವೇ?
ಶವ ಕರ್ಪಟದ ಎಳೆ ಬಿಡಿಸಿ,
ಸಹಸ್ರ ಸಹಸ್ರ ನೂಲುಗಳ ಜೋಡಿಸಿ
ಶ್ರಮವೆಂಬ ಭಕ್ತಿ, ಏಕಾಗ್ರತೆಯ ಬೆರೆಸಿ
ಮಾನವಂತರ ಮಾನ ಮುಚ್ಚುವವ ಕುಲಜನಲ್ಲವೇ?

Thursday, 8 September 2016

ಪೈಲ್ವಾನಕಂಸ, ಜರಾಸಂಧ, ಚಾಣೂರ...
ಎಲ್ಲರೂ ಮಲ್ಲರೇ
ಕೃಷ್ಣನೆಂಬ ಕಾಲನ ಮುಂದೆ
ತೊಡೆ ತಟ್ಟಿದವರೇ

ಸಾವಿರ ಸಾವಿರ ಸಾಮು ತೆಗೆದು
ಉಟಬೈಸು, ಲೆಕ್ಕವಿಲ್ಲದಷ್ಟು ದಂಡ ಹೊಡೆದು
ವಿಧಿಯ ಕುತ್ತಿಗೆ ಹಿಡಿದು
ಮಣಿಸಹೊರಟವರೇ

ಅಂತಿಂಥವನಲ್ಲ ಈ ಪೈಲ್ವಾನ
ತೊಡೆತಟ್ಟಿದ ಜಟ್ಟಿಗಳೆಲ್ಲ
ಇವನ ಕಾಲ ಸಮಾನ

ಈತನ ಪಟ್ಟುಗಳ ಪ್ರತಾಪಕ್ಕೆ
ಮಣ್ಣು ಮುಕ್ಕಿದವರೆಷ್ಟೋ?!

ಎದೆ ತಟ್ಟಿದವರು, ಮಟ್ಟಿಯ ಮುಟ್ಟಿ
ನಿಂತವರು; ಸೋಲರಿಯದ ಸರದಾರರು
ಕಾಲನೆಂಬ ಜಗಜಟ್ಟಿಯ ಎದುರು
ಮಂಡಿಯೂರಿದವರೇ!

ಅಖಾಡದಲ್ಲಿ ಬರಸೆಳೆದು ಬಿಗಿದಪ್ಪುವ
ಪಾಶದ ಪಟ್ಟಿಗೆ, ಪೆಟ್ಟಿಗೆ ಮಣಿದ
ಮಣ್ಣಾದ ಪೈಲ್ವಾನರ ಲೆಕ್ಕ ಇಟ್ಟವರಾರು?


Monday, 5 September 2016

ಅರಳಿಮರ ಮತ್ತು ಸರ್ಪ ಸಂಬಂಧ`ಮಗು ಬೇಕು' ಎಂಬ ಹಂಬಲಕ್ಕೆ ಮೂಲಭೂತ ಕಾರಣಗಳೇನು?
ಆಸ್ತಿ ರಕ್ಷಣೆಗಾಗಿಯೋ..? ವಂಶೋದ್ಧಾರಕ್ಕಾಗಿಯೋ ಅಥವಾ ಮಾನವ ಕುಲವನ್ನು ಮುಂದುವರಿಸುವ ಹಂಬಲವೋ? ಮನುಷ್ಯನಿಗೆ ರಕ್ತಗತವಾಗಿರುವ ತಲೆತಲಾಂತರದ ಸ್ವಭಾವವೋ?

ಮಕ್ಕಳಿಗಾಗಿ ಮರ ಸುತ್ತೋದಾ? ಅರಳಿ ಮರದ ಕೆಳಗೆ ಪ್ರತಿಷ್ಠಾಪಿಸಿರುವ ಮಿಥುನ ನಾಗರಗಳಿಗೆ ತನಿ ಎರೆದು ಪೂಜಿಸೋದಾ? ನೀನಿನ್ನು ಯಾವ ಕಾಲದಲ್ಲಿದ್ದೀಯಾ! ತಂತ್ರಜ್ಞಾನ ಬಲದಿಂದ ಎಲ್ಲ ಗ್ರಹಗಳನ್ನು ಸುತ್ತಿ ಬರುತ್ತಿರುವ ಕಾಲ ಇದು. ಪ್ರಣಾಳ ಶಿಶು ಹುಟ್ಟಿ, ಆ ಪ್ರಣಾಳ ಶಿಶುವಿಗೂ ಮಕ್ಕಳಾಗಿ ಎಷ್ಟೋ ವರ್ಷಗಳೇ ಕಳೆದುಹೋಗಿವೆ. ಬೇರೆಯವರ ವೀರ್ಯಾಣುಗಳನ್ನು ಬಸಿರಲ್ಲಿಟ್ಟು, ಒಂಭತ್ತು ತಿಂಗಳು ಹೊತ್ತರೂ ತನ್ನದಲ್ಲದ ಮಗುವಿಗೆ ಜನ್ಮ ನೀಡುವ ಬಾಡಿಗೆ ತಾಯಿಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುವ ಕಾಲ.

``ನಾಗ'' ಹೀಗಂದರೇನು?
ಉಸಿರು!
ಪ್ರಾಣಶಕ್ತಿ, ಜೀವಚೈತನ್ಯ ಇವೆರಡಕ್ಕೂ ಇರೋ ಸಂಬಂಧ ಏನು? ಅನ್ನೋದು ಗೊತ್ತಾದರೆ, ನಾನೇಕೆ ಅರಳಿ ಮರ ಸುತ್ತುತ್ತೇನೆ ಎಂಬುದು ನಿನಗೆ ತಿಳಿಯುತ್ತದೆ.

ಅಂದರೆ?!
ನನ್ನ ಮಾತಿನ ಮರ್ಮ, ಅಂತರಾರ್ಥ ನಿನಗೆ ತಿಳಿಯಬೇಕಾದರೆ ನಾಗರ, ಸರ್ಪದ ಗುಣ, ಸ್ವಭಾವಗಳ ಅರಿವು ನಿನಗಾಗಬೇಕು. ದೇಹದೊಳಗೆ ಉಸಿರಿನ ಮೂಲ ಎಲ್ಲಿದೆ ಎಂಬುದು ಗೊತ್ತಿರಬೇಕು. ಅದರ ಚಲನೆಯ ಮಾರ್ಗ, ಸ್ವಭಾವ ಅರ್ಥವಾಗಬೇಕು.
ನಿನಗೆ ಗೊತ್ತಾ?

ನೆಲದ ಮೇಲಿನ ನಾಗರ ಗತಿ, ಶರೀರದೊಳಗೆ ಉಸಿರಿನ ಚಲನೆ ಒಂದೇ ತೆರನಾದುದು. ಒಂದೇ ರೀತಿಯದ್ದು! ಸಮುದ್ರದಲೆಗಳ ಏರಿಳಿತ, ನಮ್ಮೊಳಗಿನ ಗಾಳಿಯ ಉಬ್ಬರಳಿತ ಎರಡೂ ಒಂದೇ! ಹಾಗೆಯೇ ನಾಗರ ನಡೆಯೂ ನೇರವಲ್ಲ, ಉಸಿರಿನದ್ದೂ ಕೂಡಾ! ಹರಿವ ನಾಗರ, ಉಸಿರು ಹರಿಯುವ ಶರೀರ ಎರಡರಲ್ಲೂ ಏಕತೆ ಇದೆ.
ನಾಗರ ನಿಯಂತ್ರಣ ಅಷ್ಟು ಸುಲಭವಿಲ್ಲ. ಉಸಿರು ಪ್ರಾಣದ ನಿಗ್ರಹವೂ ಅಷ್ಟೇ ಕಷ್ಟಸಾಧ್ಯ! ಕೆರಳಿದ ಸರ್ಪ ತುಂಬಾ ಅಪಾಯಕಾರಿ- ವಿಷಯಕಾರಿಯೂ ಕೂಡಾ

ಉಸಿರು- ಬದುಕಿನ ಚೈತನ್ಯ ಶಕ್ತಿ, ಪಂಚೇದ್ರಿಯಗಳಿಗೆ ಪ್ರೇರಕ-ಚಾಲಕ ಶಕ್ತಿ. ಕೆರಳಿದರೆ, ಮಾರಣಾಂತಿಕ, ಮಾರಕ. ಹೌದು, ಉರಿದರೆ ದೀಪ, ಕೆರಳಿದರೆ ಪ್ರಕೋಪ! ಅರಳಿದರೆ ನಂದನವನ, ಕೆರಳಿದರೆ ಕಾಳ್ಗಿಚ್ಚಿಗೆ ಬೆಂದ ಕಾನನ. ನಿಂತಲ್ಲಿ ನಿಲ್ಲದೆ ಹರಿವ ಮನಸ್ಸನ್ನು ನಿಗ್ರಹಿಸುವುದು; ಉಸಿರನ್ನು ನಿಯಂತ್ತಿಸುವುದು ಕಾಳಿಂಗನನ್ನು ಪಳಗಿಸಿದಷ್ಟೇ ಸಾಹಸ ಕಾರ್ಯ.
ಪ್ರಾಣ ತೆಗೆವ ಕಾರ್ಕೋಟಕ ವಿಷವೇ ಸದ್ಬಳಕೆಯಾದರೆ ಜೀವರಕ್ಷಕ ಔಷಧ. ಉಸಿರು ಮತ್ತು ನಾಗ; ಇವು ದ್ವಿಗುಣಗಳ ಸಂಗಮ. ಈ ದ್ವಿಮುಖಗಳ ಸಂಕೇತವೇ ನಾಗರ ಸೀಳಿದ, ಎರಡು ಹೋಳಾದ ನಾಲಿಗೆ!

ನಾಗ ಅಥವಾ ಸರ್ಪವೆನ್ನುವುದು ದೇಹದೊಳಗಿನ ಉಸಿರಿನ ಸಂಕೇತ.

ಇಲ್ಲಿ ನೋಡು ಅರಳಿಯ ಕೆಳಗೆ ಪ್ರತಿಷ್ಠಾಪಿಸಿರುವ ``ಮಿಥುನ ಸರ್ಪ'' ಇದರ ಗುರುತೇನು ಗೊತ್ತೇ? ಈ ಮೈಥುನ ಸರ್ಪ ನಿನ್ನೊಳಗೂ ಇದೆ. ನನ್ನೊಳಗೂ ಇದೆ. ಎಲ್ಲರೊಳಗೂ ಇದೆ. ಇದು ದೇಹದೊಳಗಿರುವ ಅವ್ಯಕ್ತ, ಅನುಭವ ವೇದ್ಯ ಯೋಗ ಚಕ್ರಗಳ ಸೇತುವೆ. ದೇಹದ ಉಸಿರು, ಪ್ರಾಣಶಕ್ತಿ ಹರಿಯುವ, ಪ್ರವಹಿಸುವ ಕಾಲುವೆ!

ಕೆರಳಿದ ನಾಗರ ವಿಷ- ಪ್ರಾಣಾಘಾತುಕ! ಕೆಲವೇ ನಿಮಿಷಗಳಲ್ಲಿ ನರನಾಡಿಗಳಲ್ಲಿರುವ ಚಲನೆಯನ್ನೇ ನಿಲ್ಲಿಸಿಬಿಡುತ್ತದೆ. ಆದರೆ, ಕೆರಳಿದ, ಕೆಟ್ಟ ಉಸಿರು, ನಿಯಂತ್ರಣ ಕಳೆದುಕೊಂಡ ಉಸಿರು ಕೂಡಾ ನಾಗರ ವಿಷಕ್ಕಿಂತಲೂ ಅಪಾಯಕಾರಿ, ವಿಷಕಾರಿ.
ವಿಶೇಷವೆಂದರೆ ಸಮುದ್ರದ ಏರಿಳಿತದಲ್ಲಿ, ಹಾವಿನ ನಡೆಯಲ್ಲಿ, ಚಲನೆಯಲ್ಲಿ ಎಂದೂ ಬದಲಾವಣೆಯಾಗುವುದಿಲ್ಲ. ಆದರೆ, ದೇಹದ ಪ್ರತಿ ನರ-ನಾಡಿಗಳಲ್ಲಿ ಹರಿವ ಉಸಿರಿನ ದಿಕ್ಕು ಬದಲಾಗುತ್ತದೆ. ಹರಿವ ವೇಗದಲ್ಲೂ ವ್ಯತ್ಯಾಸವಾಗುತ್ತದೆ.

ಚೈತನ್ಯದಾಯಕ ಬದುಕಿಗೆ ಕಾರಣವಾಗುವ ಉಸಿರು ಹಾದಿ ತಪ್ಪಿದರೆ, ಕಲುಷಿತ ಮನಸ್ಸಿಗೆ ಹೇತುವಾಗುತ್ತದೆ. ದೇಹವನ್ನು ರೋಗ-ರುಜಿನಗಳ ಗೂಡನ್ನಾಗಿಸಿಬಿಡುತ್ತದೆ. ದಿಕ್ಕುತಪ್ಪಿದ ಉಸಿರಿನಿಂದ ದೇಹದ ಆರೋಗ್ಯ ಮತ್ತು ಮನಸ್ಸು  ಸಂತುಲನ ಕಳೆದುಕೊಂಡು ದಿಕ್ಕಾಪಾಲಾಗುತ್ತದೆ.

ಹಾದಿತಪ್ಪುವ, ನಾಡಿಗಳಲ್ಲಿ ದಿಕ್ಕು ತಪ್ಪಿ ಹರಿಯುವ ಪ್ರಾಣವಾಯುವನ್ನು ಶುಚಿಗೊಳಿಸಿ ಸರಿದಾರಿಗೆ ತರುವ, ಉಸಿರಿಗೆ ದಿಕ್ಸೂಚಿಯಾಗುವ ಜೀವ ಚೈತನ್ಯಶಕ್ತಿ, ಆಮ್ಲಜನಕದ ಆಗರ- ಈ ಅರಳಿ ಮರ.

(ಮುಂದುವರಿಯುವುದು..)
Monday, 29 August 2016

ಮೂಲಾಧಾರ


`ಮೃಷ್ಟಾನ್ನ ಭೋಜನ ಸವಿದರೂ ರುಚಿ ಇಲ್ಲ. ಷಡ್ರಸಗಳನ್ನು ಸವಿಯಲಾಗುತ್ತಿಲ್ಲ. ಉಪ್ಪಿನ ರುಚಿ ಬಿಟ್ಟರೆ ಬೇರಾವ ರುಚಿಯೂ ನಾಲಿಗೆಗೆ ಹತ್ತುತ್ತಿಲ್ಲ...' - ನಾಲಿಗೆಯ ಅಸ್ಪಷ್ಟ ಗೊಣಗುವಿಕೆಯನ್ನು ತೆಪ್ಪಗೆ ಕೂತು ಆಲಿಸುತ್ತಿದ್ದ ಕಿವಿ- `` ನನಗೂ ಅಷ್ಟೇ ಏನೊಂದೂ ಸರಿಯಾಗಿ ಕೇಳುತ್ತಿಲ್ಲ. ವಯಸ್ಸಿನ ಪ್ರಭಾವವೋ..? ಚಪಲತೆಯ ಪ್ರತಿಫಲವೋ? ನನಗೊಂದೂ ತಿಳಿಯುತ್ತಿಲ್ಲ. ರುಚಿಕಾಣದ ಜಿಹ್ವೆಯಷ್ಟೇ ನಿಸ್ಸಾರವಾಗಿವೆ; ಸವೆದುಹೋಗಿವೆ ಶಬ್ದ ಗ್ರಹಿಸುವ ನನ್ನ ತಮಟೆಯ ಬಾಗಿಲುಗಳು..!

ರುಚಿ ಕಳೆದುಕೊಂಡ, ಏನೊಂದನ್ನೂ ಸವಿಯಲಾಗದ ನಾಲಿಗೆಯ ಹಾದಿಯಲ್ಲೇ ಹೆಜ್ಜೆ ಹಾಕುತ್ತಿದ್ದ ಕರ್ಣಗಳ ಸ್ವಗತ ಇದು.
ಈ ಎರಡೂ ಇಂದ್ರಿಯಗಳು, ಶಕ್ತಿ, ಸತ್ವ ಎರಡನ್ನೂ ಕಳೆದುಕೊಂಡಿದ್ದ ಪಂಚೇಂದ್ರಿಗಳ ಪ್ರತಿನಿಧಿಗಳಂತಿದ್ದವು.

ರುಚಿ ಕಳೆದುಕೊಂಡರೂ ನಾಲಿಗೆಯ ಮಾತಿಗೇನೂ ಬರವಿಲ್ಲ; ಕಡಿವಾಣವೂ ಇಲ್ಲ! ಕೈರುಚಿ ಸರಿ ಇಲ್ಲ ಎಂದು ಹೆಂಡತಿಯನ್ನು ಹಳಿಯುವ; ಅವಳ ಮೇಲೆ ಮನಬಂದಂತೆ ಹರಿಹಾಯುವ ಗಂಡನ ಬಾಯಲ್ಲಿ ಕೂತ ಈ ಎಲುಬಿಲ್ಲದ ನಾಲಿಗೆಗೆ, ಆಹಾರದ ರುಚಿ ಹತ್ತದಿದ್ದರೂ ಚಪಲತೆ ಮಾತ್ರ ತೀರಿಲ್ಲ!

ಹದಿನೆಂಟರ ಕಡೆಗೆ ದಾಪುಗಾಲಿಟ್ಟಿರುವ ಷೋಡಶಿಯ ಕಂಡರೆ ಈಗಲೂ ಈತನ ರಸಿಕತೆ ಎಂಬ ನಾಲಿಗೆಯ ಲಾಲಾರಸ ಸುರಿದು, ಹರಿಯುತ್ತದೆ. ಯೌವನವನ್ನೆಲ್ಲ ನೆಕ್ಕಿ, ರುಚಿನೋಡುವ ಚಪಲತೆ.

`ಕಚ್ಚೆ ಹರುಕ ನೀನು!'

ಮೊದಲು ಕಚ್ಚೆಯನ್ನು ಬಿಗಿ ಮಾಡು, ಆಗ ತಂತಾನೇ ನಿನ್ನ ನಾಲಿಗೆಯ ರುಚಿ ಹೆಚ್ಚುತ್ತದೆ. ಜಿಹ್ವಾ ಚಪಲ ಈಡೇರುತ್ತದೆ. ಅಸ್ಪಷ್ಟವಾಗಿ ಕೇಳಿಸಿಕೊಳ್ಳುವ ನಿನ್ನ ಕಿವಿಗಳೂ ನೆಟ್ಟಗಾಗುತ್ತವೆ!

ಹೆಂಡತಿಯ ಮೂದಲಿಕೆಗೆ ಹೆಡೆಬಿಚ್ಚಿದ ನಾಗರನಂತಾಗಿದ್ದ ಗಂಡ..

`` ಏನೆಂದೆ, ನಾನು ಕಚ್ಚೆ ಹರುಕನೇ?'' ಇರಬಹುದು ! ಆದರೆ, ರುಚಿ ಕಳಕೊಂಡ ನಾಲಿಗೆಗೂ; ಕೆಪ್ಪಾದ ಕಿವಿಗೂ; ನನ್ನ ಕಚ್ಚೆಹರುಕತನಕ್ಕೂ ಏನು ಸಂಬಂಧ?

``ಮೂಲಾಧಾರ!''

ಓಲೆಗರಿಗಳ ಪುಟಗಳನ್ನ ತಿರುಗಿಸುತ್ತಾ ಪತ್ನಿ ಮೆಲ್ಲಗೆ ನುಡಿದಳು-`` ಇದು ನಿಮ್ಮ ಉಸಿರಿನ ಮೂಲ; ಬದುಕಿನ ಆಧಾರ! ವೃಕ್ಷಕ್ಕೆ ಬೇರಿದ್ದಂತೆ, ದೇಹಕ್ಕೆ ಇದು ಮೂಲಾಧಾರ!

ಮನುಜನಿಂದ ಹಿಡಿದು ಸೃಷ್ಟಿಯ ಚರಾಚರ ಪ್ರಾಣಿ-ಪಕ್ಷಿಗಳಿಗೆ ಈ ವಸುಂಧರೆ ಆಶ್ರಯದಾತೆ, ಭುವಿಯಿಲ್ಲದ ಬದುಕಿಲ್ಲ. ಸಕಲ ಜೀವಕೋಟಿಗೆ ಪೃಥ್ವೀ ಆಧಾರ. ಹಾಗೆಯೇ `ಮೂಲ'ವಿಲ್ಲದ ಜೀವವಿಲ್ಲ, ದೇಹವಿಲ್ಲ!

ಹೆಂಡತಿಯ ಮಾತಿನ ಓಘಕ್ಕೆ ಒಂದು ಕ್ಷಣ ತಡೆಯೊಡ್ಡಿದ ಗಂಡ ಕೇಳಿದ-`` ಏನದು ಮೂಲಾಧಾರ?''

ಇದೊಂದು ಶಕ್ತಿಕೇಂದ್ರ. ಮನುಷ್ಯ ತನ್ನ ಅಂತರಂಗದಲ್ಲಿ ಅತಿಯಾಗಿ ಪ್ರೀತಿಸುವ, ಬಹಿರಂಗದಲ್ಲಿ ಮೂಗುಮುರಿಯುವ; ಅಸಹ್ಯಪಟ್ಟುಕೊಳ್ಳುವ ಜಾಗ ಅದು. ಗುದದ್ವಾರ ಮತ್ತು ಜನನೇಂದ್ರಿಯದ ನಡುವಿರುವ ಸ್ಥಳ. ಹೌದು ! ಇಲ್ಲೇ ಇರುವುದು ಮೂಲಾಧಾರ. ಇದು ಮಾನವ ಜನಾಂಗದ ಜನ್ಮಸ್ಥಳ. ಮನುಕುಲ ಉಗಮಸ್ಥಾನ. ಪೂರ್ವಿಕರಿಂದ ಹಿಡಿದು ಇಲ್ಲಿಯವರೆಗೆ ಮನುಷ್ಯ ಕುಲದ ವಂಶವೃಕ್ಷ ಬೇರುಗಳು ಟಿಸಿಲೊಡೆದು ಚಿಗುರಿ; ವಟವೃಕ್ಷವಾಗಿ ಬೆಳೆದು ವಿಸ್ತಾರಗೊಂಡಿದ್ದು ಇಲ್ಲಿಂದಲೇ! ಪ್ರತಿ ಜೀವಿಯ ಕುಲದ ಉನ್ನತಿ, ಅವನತಿಗೆ ಕಾರಣವೂ ಇದೇ!

ಇನ್ನು ಈ ಮೂಲಕ್ಕೂ- ಬಾಯಿಯ ನಾಲಿಗೆಗೂ; ಕೇಳದ ಕಿವಿಗೂ ಎತ್ತಣ ಸಂಬಂಧ ಎಂದಿರಲ್ಲಾ?

ನಾಲಿಗೆಯ, ಕಿವಿಗಳ ಬೇರುಗಳಿರುವುದೇ ಈ ಮೂಲದಲ್ಲಿ. ನಾಲಿಗೆಯಲ್ಲಿ ಷಡ್ರಸರಗಳು ಸ್ರವಿಸುವುದು; ಕಿವಿಗೆ ಧ್ವನಿತರಂಗಳನ್ನು ಗ್ರಹಿಸಲು ಬೇಕಾದ ಶಕ್ತಿಸಂಚಯ ಆಗೋದು ಇಲ್ಲಿಂದಲೇ! ಬೇರಿಲ್ಲದ ಮರವನ್ನು, ರೆಕ್ಕೆಗಳಿಲ್ಲದ ಹಕ್ಕಿಗಳನ್ನು ಕಲ್ಪಿಸಿಕೊಳ್ಳಲಾದೀತೇ? ಬೇರಿಲ್ಲದ ಮರ ನಡುಮುರಿದು ಉರುಳುವುದು ನಿಶ್ಚಿತ. ರೆಕ್ಕೆಗಳನ್ನು ಕಳೆದುಕೊಂಡ ಪಕ್ಷಿ ಗಗನದತ್ತ ಮುಖಮಾಡಲು ಸಾಧ್ಯವೇ?

                                                                                                     (ಮುಂದುವರಿಯುವುದು..)