ಅಲಮಾರಿನಲ್ಲಿದ್ದ ಗೊಂಬೆ ಬೇಕೆಂದು ಮಗಳು ಹಠ ಹಿಡಿದ್ದಳು. ಅವಳನ್ನೇ ಗೊಂಬೆಯಂತೆ ಎತ್ತಿ ಹಿಡಿದು ಮೇಲಿನ ಕಪಾಟಿನಲ್ಲಿದ್ದ ಗೊಂಬೆಯನ್ನು ಎತ್ತಿಕೊಳ್ಳುವಂತೆ ಹೇಳಿದೆ. ಚಾಚಿದ ಅವಳ ಕೈಗೆ ಟೆಡ್ಡಿಬೇರ್ ಸಿಕ್ಕಿದ್ದರಿಂದ ಆಕಾಶವೇ ಕೈಗೆಟುಕಿದಷ್ಟು ಖುಷಿ ಅವಳ ಮುಖದಲ್ಲಿ ಮಿನುಗುತ್ತಿತ್ತು. ಅನಂತರ ಮೇಲ್ಭಾಗದಲ್ಲಿ ಕಾಣುವ ವಸ್ತುಗಳೆಲ್ಲ ಬೇಕೆಂಬ ಅವಳ ಒತ್ತಡ ದಿನೇದಿನೇ ಹೆಚ್ಚಾಗುತ್ತಲೇ ಹೋಗುತ್ತಿತ್ತು. ಮೇಲ್ಛಾವಣಿಯಲ್ಲಿ ತೂಗುವ ಪಂಕ(ಫ್ಯಾನು) ಮುಟ್ಟಿಸು..., ಗೋಡೆಯಲ್ಲಿ ನೇತಾಡುವ ಗಡಿಯಾರ ಕೊಡು..., ಹೀಗೆ ನನ್ನ ಹೆಗಲ ಮೇಲೆ ಅವಳ ಸವಾರಿ ಶುರುವಾಯಿತು.
ಒಮ್ಮೆ ಸಂಜೆ ಪಾರ್ಕ್‌ನಲ್ಲಿ ಮಗಳೊಂದಿಗೆ ವಾಕಿಂಗ್ ಮಾಡುತ್ತಿದ್ದೆ. ನನ್ನ ಕೈ ಹಿಡಿದು ಹೆಜ್ಜೆ ಹಾಕುತ್ತಿದ್ದ ಅವಳಿಗೆ ಅಲ್ಲಿ ಕಾಣುವ ಎಲ್ಲದರ ಬಗ್ಗೆಯೂ ತೀರದ ಬಾಲ್ಯ ಸಹಜ ಕುತೂಹಲ. ಅಲ್ಲಿದ್ದ ಮೊಲದ ಆಕಾರದ ಕಸದ ಬುಟ್ಟಿ ಕಂಡು ಅದನ್ನು ಮನೆಗೆ ಕೊಂಡೊಯ್ಯಬೇಕೆಂದು ಒಂದೇ ಸಮ ಪೀಡಿಸಲಾರಂಭಿಸಿದಳು. ಅದಾಗಲೇ ಪಶ್ಚಿಮದ ಅಂಗಳಕ್ಕೆ ಸೂರ್ಯ ಜಾರಿ, ಚಂದ್ರ ಮೇಲೆ ಬಂದಿದ್ದ. ಅವಳನ್ನು ಸಮಾಧಾನ ಪಡಿಸಲೆಂದೇ ಬಾನಿನೆಡೆಗೆ ಕೈ ತೋರಿಸಿದೆ. ಮೋಡಗಳ ಮರೆಯಲ್ಲಿ ಓಡುತ್ತಿದ್ದ ಚಂದ್ರನನ್ನು ಕಂಡ ಅವಳಿಗೆ ಎಲ್ಲಿದ್ದ ಹಿಗ್ಗು.
ರಾತ್ರಿವೇಳೆ ನನ್ನೊಂದಿಗೆ ಬೈಕ್‌ನಲ್ಲಿ ಕುಳಿತು ಸವಾರಿ ಮಾಡುವಾಗಲೆಲ್ಲ ಗಗನದೆಡೆಗೆ ಅವಳ ನೋಟ ಆಕಾಶದೆಡೆಗೆ ಇರುತ್ತಿತ್ತು. ಬೈಕಿನ ವೇಗಕ್ಕೆ ಚಂದ್ರನೂ ನಮ್ಮೊಂದಿಗೆ ಓಡಿ ಬರುತ್ತಿರುವಂತೆ ಭಾಸವಾಗುತ್ತಿದ್ದುದು ಅವಳಿಗೆ ಮುದ ನೀಡುತ್ತಿತ್ತು. ಮನೆ ಬಳಿ ಬೈಕ್ ನಿಂತಾಗ ಓಟ ನಿಲ್ಲಿಸುತ್ತಿದ್ದ ಚಂದ್ರ ಕಾಂಕ್ರಿಟ್ ಕಾಡಿನ ನಡುವೆ ಮರೆಯಾಗಿಬಿಡುತ್ತಿದ್ದ. ‘ಅಪ್ಪ, ಚಂದಮಾಮ ಮನೆಗೆ ಹೋದ ಅಲ್ವಾ? ನಾಳೆ ಮತ್ತೆ ಬರ್ತಾನೆ ಅಲ್ವಾ?’ ಎಂಬ ಪ್ರಶ್ನೆಗಳೊಂದಿಗೆ ಮಗಳ ಬೈಕ್ ಸವಾರಿಯೂ ಮುಗಿಯುತ್ತಿತ್ತು.
ಪಾರ್ಕ್‌ನಲ್ಲೂ ಅಂದು ಸಹ ಆಕಾಶದೆಡೆಗೆ ಮುಖಮಾಡಿ ಅವಳು ಓಡತೊಡಗಿದ್ದಳು. ಬಾನಿನಲ್ಲಿ ಚಂದ್ರನೂ ಅವಳೊಂದಿಗೆ ಓಟ ಸ್ಪರ್ಧೆ ನಡೆಸಿದ್ದ. ಅವಳು ನಿಂತಾಗ ನಿಲ್ಲುತ್ತಿದ್ದ, ಓಡಿದಾಗ ಓಡುತ್ತಿದ್ದ. ಹೀಗೆ ಎಷ್ಟೋ ಹೊತ್ತು ಇಬ್ಬರ ನಡುವೆ ರನ್ನಿಂಗ್ ರೇಸ್ ನಡೆದು ಬೇಸರವಾಗಿ ಮತ್ತೆ ನಾನಿದ್ದೆಡೆಗೆ ಅವಳು ಓಡಿ ಬಂದಳು. ನಕ್ಷತ್ರಗಳ ನಡುವೆ ನಗುತ್ತಿದ್ದ ಚಂದ್ರ ಬೇಕೆಂದು ಹಠ ಮಾಡತೊಡಗಿದಳು. ‘ನನ್ನನ್ನು ಮೇಲೆತ್ತಿ ಹಿಡಿ ಚಂದಮಾಮನನ್ನು ಮುಟ್ಟುತ್ತೇನೆ...’ ಎನ್ನತೊಡಗಿದಳು.
ತನ್ನ ಹೆಗಲೇರಿ ಕುರಿತು ಆಕಾಶದೆಡೆಗೆ ಕೈ ಚಾಚಿದರೆ ಸಿಗಲು ಚಂದ್ರನೇನು ಅಲಮಾರಿನಲ್ಲಿರುವ ಗೊಂಬೆಯೇ?! ಗೋಡೆಯಲ್ಲಿ ನೇತಾಡುವ ಗಡಿಯಾರವೇ, ಚಾವಣಿಯಲ್ಲಿ ತೂಗಾಡುವ ಪಂಕವೇ? ಆದರೂ ಅವಳ ಆಸೆಗೆ, ಕಲ್ಪನೆಗಳಿಗೆ ತಣ್ಣೀರೆರೆಚಬಾರದು ಎಂದು ಅವಳನ್ನು ಹಿಡಿದು ಮೇಲೆತ್ತಿದೆ. ಚಂದ್ರನನ್ನು ಮುಟ್ಟುವ ಖುಷಿಯಲ್ಲಿ ಆಕಾಶಕ್ಕೆ ಕೈ ಚಾಚಿದಳು. ಆದರೆ ಶಶಾಂಕ ಸಿಗಬೇಕಲ್ಲ? ‘ಮಗು ನೀನಿನ್ನು ಚಿಕ್ಕವಳು. ಅವನು ತುಂಬಾ ಎತ್ತರದಲ್ಲಿದ್ದಾನೆ. ದೊಡ್ಡವಳಾದ ಮೇಲೆ ಸಿಗುತ್ತಾನೆ...’ ಎಂದಾಗಲೇ ಅವಳಿಗೆ ಸಮಾಧಾನ.
**** ****
ನಗರದ ಯಾಂತ್ರಿಕ ಬದುಕಿನಿಂದ ಒಂದು ದಿನವಾದರೂ ದೂರವಿರಬೇಕು ಎಂದು ಬೆಂಗಳೂರಿನಿಂದ 90 ಕಿ.ಮೀ. ದೂರವಿರುವ ತೋಟದ ಮನೆಗೆ ತೆರಳಿದ್ದೆವು. ಪ್ರಕೃತಿಯ ಮಡಿಲಲ್ಲಿದ್ದ ಮನೆಯ ಅಂಗಳದಲ್ಲಿ ಮಗಳು ಆಟವಾಡುತ್ತಿದ್ದಳು. ಅಕಸ್ಮಾತ್ ಚಿಟಪಟ ಮಳೆಹನಿ ಶುರುವಾಯಿತು. ಮಗಳು ಜೀವನದಲ್ಲಿ ಕಂಡ ಮೊದಲ ಮಳೆ ಅದು. ಅನಿರೀಕ್ಷಿತವಾಗಿ ಬಂದ ವರ್ಷಧಾರೆ ಎಂದೋ ಅವಳು ಕಲಿತಿದ್ದ ಮಳೆ ಪದ್ಯವನ್ನು ನೆನಪಿಗೆ ತಂದಿತ್ತು.
rain rain go away
little children wants to play
you come another day
ಬಾಗಿಲ ಬಳಿ ನಿಂತು ಈ ಇಂಗ್ಲಿಷ್ ಪದ್ಯವನ್ನು ತೊದಲುತ್ತಿದ್ದಳು. ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್..., ಹಾಟ್ ಕ್ರಾಸ್ ಬನ್ಸ್..., ಪುಟಾಣಿ ಕರುವೊಂದು ನಮ್ಮನೆಲಿದೆ, ಮುಟ್ಟಿದರೆ ನಿಲ್ಲದೆನೆ ಕುಣಿದಾಡುತ್ತೆ... ಮಕ್ಕಳಿಗೆ ಮುದ ನೀಡುವ, ಮನೆಯಲ್ಲೇ ಕಲಿಯಬಹುದಾಗ ಇಂಥ ಸಾಲುಗಳು ನಮಗೆ ತೀರ ನಗಣ್ಯ ಎನಿಸಬಹುದು. ಆದರೆ ಮಕ್ಕಳು ಸುತ್ತಲಿನ ಪರಿಸರಕ್ಕೆ ಸ್ಪಂದಿಸಲು ಈ ಪದ್ಯಗಳು ಪ್ರೇರೇಪಿಸಬಲ್ಲವು. ಮಳೆ ಹನಿ ಕಂಡಾಗ rain rain go away ಎನ್ನುವ ಪುಟಾಣಿಗೆ, ಹಸುವಿನ ಕರು ಕಂಡಾಗ ಸಹಜವಾಗೇ ಕರುವಿನ ಹಾಡು ನೆನಪಾಗಿಬಿಡುತ್ತದೆ.
ಮಕ್ಕಳ ಆಸೆಗಳು ಅವರಷ್ಟೇ ಪುಟ್ಟದಿರಬಹುದು ಆದರೆ ಅವರ ಕಲ್ಪನೆಗಳು ನಮ್ಮ ಆಲೋಚನೆಗಳಿಗೂ ನಿಲುಕಷ್ಟು ದೊಡ್ಡದಿರುತ್ತವೆ, ಎತ್ತರದಲ್ಲಿರುತ್ತವೆ. ಅವರೊಳಗಿನ ಪ್ರತಿಭೆಯ ಚಿಗುರು ಹೊಮ್ಮಲು, ಕಲ್ಪನೆಗಳು ಗರಿಗೆದರಲು ಅವರ ಪುಟ್ಟ ಪುಟ್ಟ ಆಸೆಗಳನ್ನು ಚಿವುಟಬಾರದು. ಆಲದ ಬೀಜ ಪುಟ್ಟದಿರಬಹುದು, ಮರ ಚಿಕ್ಕದಲ್ಲ.
No comments:
Post a Comment