Thursday 19 October 2017

ರಹಸ್ಯ ಸೃಷ್ಟಿ

ಅಂಬೆಗಾಲು; ಎಡವಿದ ಕಾಲು 
ರೆಕ್ಕೆ ಬಲಿತರೆ ಮುಗಿಲು
ಗುಲಗಂಜಿ ಬೀಜ ಟಿಸಿಲೊಡೆದು ಬೇರೂರಿ,
ಮೋಡಗಳ  ಚುಂಬಿಸೆ ವರ್ಷಧಾರೆ!
ಅಣು ಅಣುವೂ; ಕಣ ಕಣವೂ ಶಕ್ತಿಯ ಒರತೆ
ತಬ್ಬಿ ಹಬ್ಬುವ ಲತೆ; ಮರ ಬಿಗಿವ ಪಾಶ!

ಬೀಜ ಸತ್ತರೆ ವೃಕ್ಷ ;  ಮರ ಮರಣಿದರೆ ಬೀಜ
ರೂಪ ಬದಲಿಸುವ  ಪ್ರಕೃತಿಯಾಟದಲಿ
ಇಲ್ಲವಾಗುವುದು ಬೀಜವೋ? ಮರವೋ?!
ಬಗೆಹರಿಯದ ಬೀಜ-ವೃಕ್ಷ ನ್ಯಾಯ

ಮೌನ ಮುರಿದರೆ ಮಾತು; ಮಾತು ಮುಗಿದರೆ ಮೌನ
ಶಬ್ದಕ್ಕೆ ನಿಲುಕದ; ಮೌನಕ್ಕೆ ಸಿಲುಕದ ಪ್ರಕೃತಿಯ
ಮೌನದಲಿ ಮಾತೋ; ಮಾತಿನಲಿ ಮೌನವೋ?

ಬಣ್ಣ ಬಣ್ಣದ ಪಾತ್ರ ಬದಲಿಸುವ
ಪಾತರಗಿತ್ತಿಯ ತತ್ತಿಯೊಳಗೆ ಜಗದ ನಾಟಕ
ಕ್ರಿಯೆಗೆ ಪ್ರತಿಕ್ರಿಯೆ; ದನಿಗೆ ಮಾರ್ದನಿ
ಎರಡೊಂದಾಗುವ ಸೃಷ್ಟಿ, ನಿಗೂಢ ರೂಪಕ

No comments:

Post a Comment