Sunday, 4 November 2018

ದೇಗುಲಗಳಲ್ಲಿ ಕಂಡ ಫ್ಯಾಷನ್ ಜಗತ್ತು..!
 ಕೆಲ ದಶಕಗಳ ಹಿಂದಿನವರೆಗೂ ಪಾಶ್ಚಿಮಾತ್ಯರು ಭಾರತವನ್ನ  ನೋಡೋ ದೃಷ್ಟಿಯೇ ವಿಚಿತ್ರವಾಗಿತ್ತು. ಭಾರತವೊಂದು ಬಡ, ಭಿಕ್ಷುಕ ರಾಷ್ಟ್ರ ಅಂತಲೇ ಭಾವಿಸಿದ್ರು. ಆದ್ರೆ ಭಾರತದ ಪ್ರಾಚೀನ ದೇಗುಲಗಳಲ್ಲಿರೋ ಕೆಲವು ವಿಶೇಷ ಶಿಲ್ಪಗಳನ್ನು ಕಂಡಾಗ ನಿಜಕ್ಕೂ ಈ ದೇಶದ ಬಡ ಭಿಕ್ಷುಗಳ ದೇಶವಾಗಿತ್ತಾ? ಖಂಡಿತಾ ಇಲ್ಲ!  ಪಾಶ್ಚಿಮಾತ್ಯ ಜಗತ್ತು ಕಣ್ ಬಿಡೋಕೂ ಮುನ್ನವೇ ಇಲ್ಲೊಂದು ಆಧುನಿಕ ಜೀವನ ಇತ್ತು ಅನ್ನೋದಕ್ಕೆ ನಮ್ಗೆ ಸಾಕಷ್ಟು ಉದಾಹರಣೆಗಳು ಸಿಗ್ತಾವೆ.  

ಲಂಡನ್ ಇವತ್ತು ಇಡೀ ಜಗತ್ತಿನ ಹಾರ್ಟ್ ಆಫ್ ದಿ ಫ್ಯಾಷನ್ ಅಂತಲೇ ಫೇಮಸ್ ಆಗಿದೆ. ಇದಕ್ಕೆ ಕಾರಣ ಲಂಡನ್ ನಲ್ಲಿರೋ ಹಲವು ವಿಖ್ಯಾತ  ಫ್ಯಾಷನ್ ಸ್ಕೂಲ್ ಗಳು. ಹೊಸ ಪೀಳಿಗೆಯನ್ನ, ಮಾಡೆಲ್ ಗಳನ್ನ ಸೂಜಿಗಲ್ಲಿನಂತೆ ಸೆಳೆದಿರೋ ಫ್ಯಾಷನ್ ಹಬ್ ಅದು. ಹಾಗೇನೇ ಫ್ರಾನ್ಸ್​ನ ಪ್ಯಾರಿಸ್ ಅಂತೂ ಮಾಡೆಲ್ ಗಳ ಹಾಟ್ ಫೇವರಿಟ್ ಎನಿಸಿಕೊಂಡಿದೆ.

ವಿಶ್ವದ ಚರಿತ್ರೆಯ ಪುಟಗಳಲ್ಲಿ ಈ ಎರಡೂ ನಗರಗಳು ಅತಿ ಪ್ರಾಚೀನ ಸಿಟಿಗಳು. ಆದ್ರೆ ಲಂಡನ್ ನಲ್ಲಿ ಫ್ಯಾಷನ್ ಜಗತ್ತು ತೆರೆದುಕೊಂಡಿದ್ದು 18ನೇ ಶತಮಾನದ ಅಂತ್ಯಭಾಗದಲ್ಲಿ. ಹಾಗೆ ನೋಡಿದ್ರೆ ಫ್ಯಾರಿಸ್​ನ ಫ್ಯಾಷನ್  ಜಗತ್ತಿಗೆ ಸುದೀರ್ಘ ಚರಿತ್ರೆಯಿದೆ. 15ನೇ ಶತಮಾನದ ಅಂತ್ಯಭಾಗದಲ್ಲಿ ಫ್ಯಾರಿಸ್ ಜಗತ್ತಿನ ಗಮನ ಸೆಳೆದಿತ್ತು.

ವಿಶೇಷ ಅಂದ್ರೆ ಜಗತ್ತಿನ ಈ ಎರಡೂ ಪ್ರಾಚೀನ ನಗರಿಗಳಲ್ಲಿ ಫ್ಯಾಷನ್  ಅಂದ್ರೆ ಸೌಂದರ್ಯ ಪ್ರಜ್ಞೆ ಕಣ್ ಬಿಡೋಕೂ ನೂರಾರು ವರ್ಷಗಳ ಹಿಂದೆಯೇ ಅದೆಂಥಾ ಆಧುನಿಕ ಬದುಕು, ಸುಸಂಸ್ಕೃತ  ಸೌಂದರ್ಯ ಪ್ರಜ್ಞೆ ಭಾರತದಲ್ಲಿತ್ತು ಅನ್ನೋದಕ್ಕೆ ನಮ್ಗೆ ಸಾಕಷ್ಟು ಉದಾಹರಣೆಗಳು ಸಿಗ್ತಾವೆ. ನೂರಾರು ವರ್ಷಗಳ ಹಿಂದೆಯೇ  ಇಲ್ಲಿನ ದೇಗುಲಗಳ ಶಿಲೆಗಳಲ್ಲಿ ಫ್ಯಾಷನ್  ಜಗತ್ತು ಅರಳಿತ್ತು ಅನ್ನೋದನ್ನ ನೋಡಿದ್ರೆ, ನಿಜಕ್ಕೂ ನೀವು ಅಚ್ಚರಿಗೊಳ್ತೀರಿ!

ಒಡಿಶಾದ ಕೊನಾರ್ಕ್ ಮಂದಿರದಿಂದ ಹಿಡಿದು ಆಂಧ್ರಪ್ರದೇಶದ ರಾಮಪ್ಪ ದೇಗುಲದ ವರೆಗೆ ದೇಶದ ಹಲವು ಪ್ರಾಚೀನ ದೇಗುಲಗಳಲ್ಲಿ ಹೈಹೀಲ್ಡ್  ಚಪ್ಪಲಿ ಧರಿ ಶಿಲ್ಪಸುಂದರಿಯರನ್ನ ನಾವು ನೋಡಬಹುದು. ವಿಶೇಷವಾಗಿ ಮೇಲಿನ ಚಿತ್ರವನ್ನೊಮ್ಮೆ ನೋಡಿ. ಅಚ್ಚರಿಯ ಸಂಗತಿಯೆಂದ್ರೆ ಈಕೆಯ ಕಾಲುಗಳಲ್ಲಿರೋದು ಹೈಹೀಲ್ಡ್ ಚಪ್ಪಲಿಗಳು ! ಸತ್ಯ ಸಂಗತಿ ಏನ್ ಗೊತ್ತಾ? ಇವತ್ತು ಹಾರ್ಟ್ ಆಫ್ ದಿ ಫ್ಯಾಷನ್ ಸಿಟೀಸ್ ಅಂತಲೇ ಕರೆಸಿಕೊಂಡಿರೋ ಲಂಡನ್ ಹಾಗೂ ಫ್ಯಾರಿಸ್​ನ ಮಹಿಳೆಯರು ಹೈಹೀಲ್ಡ್ ಅಲ್ಲ,  ಸಾಮಾನ್ಯ ಚಪ್ಪಲಿಗಳನ್ನ ಧರಿಸೋಕೆ ಶುರು ಮಾಡಿದ್ದೇ 16ನೇ ಶತಮಾನದ ಮಧ್ಯಭಾಗದಿಂದ. ಅಂದ್ರೆ ಈ ಯೂರೋಪ್ ಮಂದಿಗಿಂತ 350 ವರ್ಷಗಳ ಹಿಂದೆಯೇ  ಭಾರತೀಯ ಮಹಿಳೆ  ಹೈಹೀಲ್ಡ್  ಪಾದರಕ್ಷೆಗಳನ್ನ ಧರಿಸ್ತಿದ್ಲು ಅನ್ನೋದಕ್ಕೆ, ಈ ರಾಮಪ್ಪ ಮಂದಿರದಲ್ಲಿರೋ ಈ ಶಿಲ್ಪ ಸುಂದರಿಯೇ ಪ್ರತ್ಯಕ್ಷ ಸಾಕ್ಷಿ. ಇಷ್ಟಕ್ಕೂ ಈ ಕೊನಾರ್ಕ್ ಮಂದಿರ ನಿರ್ಮಾಣವಾಗಿದ್ದು ಯಾವಾಗ ಗೊತ್ತಾ?  800 ವರ್ಷಗಳ ಹಿಂದೆ. ಯೂರೋಪ್ ನಲ್ಲಿ ಫ್ಯಾಷನ್ ಜಗತ್ತು ಕಣ್ ಬಿಡೋಕೂ 400 ವರ್ಷಗಳ ಹಿಂದೆ. ಅಂದ್ರೆ ಕ್ರಿ.ಶ. 1200ರಲ್ಲಿ. 

ನಿಮ್ಗೆಲ್ಲ ಗೊತ್ತಿರೋ ಹಾಗೆ ಇಂದಿನ ಮಹಿಳೆಯರ ವ್ಯಾನಿಟಿ ಬ್ಯಾಗ್ ಗಳಲ್ಲಿ ಏನಿಲ್ಲದಿದ್ರೂ ಸಣ್ಣ ಕನ್ನಡಿಯಂತೂ ಇದ್ದೇ ಇರುತ್ತೆ. ಇದು ಪ್ರತಿ ಮಹಿಳೆಯ ಸೌಂದರ್ಯ ಪ್ರಜ್ಞೆಯ ಪ್ರತೀಕ, ಅಷ್ಟೇಅಲ್ಲ, ಇಂದಿನ ಫ್ಯಾಷನ್ ಕೂಡಾ! ಹಾಗೇ ನೋಡಿದ್ರೆ ಮಹಿಳೆಯರ ಈ ದರ್ಪಣ ಸೌಂದರ್ಯದ ಹಿಂದೆಯೂ ನೂರಾರು ವರ್ಷಗಳ ಇತಿಹಾಸವಿದೆ. ಇದಕ್ಕೆ ಕೊನಾರ್ಕ್ ಮಂದಿರದಿಂದ ಹಿಡಿದು ನಮ್ಮ ಕರ್ನಾಟಕದ ಬೇಲೂರಿನ ದೇಗುಲದಲ್ಲಿರೋ ದರ್ಪಣ ಸುಂದರಿಯ ವರೆಗೆ  ಹಲವು ದೇಗುಲಗಳಲ್ಲಿ ದರ್ಪಣ ಸುಂದರಿಯನ್ನ ನೋಡೇ ಇರ್ತೀರಿ. ದುರಂತ ಅಂದ್ರೆ ಈ ಹೈಹೀಲ್ಡ್ ಚಪ್ಪಲಿ ಹಾಗೂ ಫೋರ್ಟಬಲ್ ಕನ್ನಡಿಯನ್ನ, ಪಾಶ್ಚಿಮಾತ್ಯ ಜಗತ್ತಿನ ಅನ್ವೇಷಣೆ ಅಂತಲೇ ನಾವಿವತ್ತು ಭಾವಿಸಿದ್ದೀವಿ. ಆದ್ರೆ ರಾಮಪ್ಪ ಮಂದಿರದಲ್ಲಿರೋ ಈ ಶಿಲ್ಪ ಸುಂದರಿಯರನ್ನ ಕಂಡಾಗ, ಹೈಹೀಲ್ಡ್ ಚಪ್ಪಲಿ ಹಾಗೂ ಫೋರ್ಟಬಲ್ ಕನ್ನಡಿಗಳ ಕಲ್ಪನೆ ಅರಳಿದ್ದೂ ಇದೇ ಭಾರತದಲ್ಲಿ ಅನ್ನೋದು ನಮ್ಗೆ ಗೊತ್ತಾಗುತ್ತೆ..  

ಶಿಲ್ಪದಲ್ಲಿ ಕಂಡ ವಿಶ್ವ! ಇದು ಪ್ರಾಚೀನ ಭಾರತದ ರಾಯಭಾರ


   
ಭಾರತ ವಿಶ್ವದ ಇತರ ರಾಷ್ಟ್ರಗಳ ಜೊತೆ ಸಂಪರ್ಕ ಬೆಳೆಸಿದ್ದು ಯಾವಾಗ? ಆಧುನಿಕ ಇತಿಹಾಸಕಾರರಂತೂ 15ನೇ ಶತಮಾನದವರೆಗೂ ದಕ್ಷಿಣ ಭಾರತಕ್ಕೆ ವಿಶ್ವದ ಸಂಪರ್ಕವೇ ಇರ್ಲಿಲ್ಲ ಅಂತ ವಾದಿಸ್ತಾರೆ. ಹಾಗಾದ್ರೆ ವಾಸ್ಕೋಡಿಗಾಮನಿಗಿಂತ ಮೊದಲು  ಭಾರತಕ್ಕೆ ಬೇರೆ ರಾಷ್ಟ್ರಗಳ ಜೊತೆಗೂ ಸಂಪರ್ಕವೇ ಇರಲಿಲ್ವಾ? ಖಂಡಿತಾ ಇತ್ತು ಅನ್ನುತ್ತೆ ಭಾರತದ ಪ್ರಾಚೀನ ಚರಿತ್ರೆ. ವಾಸ್ಕೋಡಿಗಾಮನಿಂತ ಸಾವಿರಾರು ವರ್ಷಗಳ ಹಿಂದೆಯೇ ಈ ದೇಶದ ಜನ, ವಿಶ್ವದ ಹಲವು ದೇಶಗಳ ಜೊತೆ  ಬಾಂಧವ್ಯ ಹೊಂದಿದ್ರು. ಅಷ್ಟೇಅಲ್ಲ, ವ್ಯಾಪಾರ ವಹಿವಾಟನ್ನೂ ನಡೆಸ್ತಿತ್ತು. ಭಾರತದ ಹಲವು ದೇವಾಲಯಗಳ ಗೋಡೆಗಳಲ್ಲಿರೋ ವಿದೇಶಿಯರ ಶಿಲ್ಪಗಳೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ. ಅಷ್ಟೇಅಲ್ಲ, ಪಾಶ್ಚಿಮಾತ್ಯರು ಹೇಳುವಂತೆ ಇದೊಂದು ಹಾವಾಡಿಗರ ದೇಶವಾಗಿರ್ಲಿಲ್ಲ. ಅತ್ಯಂತ ಆಧುನಿಕ ಸಮಾಜ ಇಲ್ಲಿತ್ತು  ಅನ್ನೋದಕ್ಕೂ ನಮ್ಗೆ ಸಾಕಷ್ಟು ಪುರಾವೆಗಳನ್ನ ಸಿಕ್ತಾವೆ. ಆ ಪುರಾವೆಗಳಿಗೆ ಇಲ್ಲಿವೆ ನೋಡಿ ಕೆಲವು ಉದಾಹರಣೆಗಳು. 
  
ತಲೆ ಮೇಲೆ ಟೋಪಿ, ಮುಖದ ಮೇಲೆ ಫ್ರೆಂಚ್ ಗಡ್ಡ, ತುಂಬು ತೋಳಿನ ಶರ್ಟ್​ ತೊಟ್ಟು ಕೂತ ಈ ಶಿಲ್ಪವನ್ನೊಮ್ಮೆ ನೋಡಿಬಿಡಿ. ಮೊದಲ ನೋಟದಲ್ಲೇ ಇದೊಂದು ಪಾಶ್ಚಿಮಾತ್ಯನ ಶಿಲ್ಪ ಅನ್ನೋದು ಎಂಥವರಿಗೂ ಗೊತ್ತಾಗಿಬಿಡುತ್ತೆ. ಯಾಕೆಂದ್ರೆ ಈ ಶಿಲ್ಪವಿರೋ ದೇವಾಲಯದ ಗೋಡೆಗಳಲ್ಲಿ ಅಂದಿನ ಭಾರತದ ಜನಜೀವನ ಹೇಗಿತ್ತು ಅಂತ ಹೇಳೋ ಬೇರೆ ಶಿಲ್ಪಗಳೂ ನಮ್ಗೆ ಕಾಣೋಕೆ ಸಿಕ್ತಾವೆ. ಈ ಭಾರತೀಯ ಶಿಲ್ಪಗಳ ವೇಷ-ಭೂಷಣ ಈ ವಿದೇಶಿಗಳ ಶಿಲ್ಪಕ್ಕಿಂತ ತೀರಾ ಭಿನ್ನವಾಗಿದೆ ಅನ್ನೋದು ನಮ್ಗಿಲ್ಲಿ ಸುಲಭವಾಗಿ ಗೊತ್ತಾಗುತ್ತೆ..

ಇಷ್ಟಕ್ಕೂ ವಿದೇಶಿಗನ ಈ ಶಿಲ್ಪವಿರೋ ಮಂದಿರ ಯಾವ್ದು ಅಂದುಕೊಂಡ್ರಿ! ತಂಜಾವೂರಿನ  ಬೃಹದೀಶ್ವರ ಮಂದಿರ. ನಮ್ಗೆಲ್ಲ ಗೊತ್ತಿರೋ ಹಾಗೇ ಪ್ರಾಚೀನ ದೇವಾಯಲಗಳ ಗೋಡೆಗಳಲ್ಲಿ ರಾಮಾಯಣದ ಸನ್ನಿವೇಶಗಳನ್ನೋ, ಮಹಾಭಾರತದ ಕಥೆಗಳನ್ನೋ ಚಿತ್ರಿಸೋದು ಸಾಮಾನ್ಯ. ಆದ್ರೆ ಈ ಬೃಹದೀಶ್ವರನ ಮಂದಿರದಲ್ಲಿ ಇತರ ಸಾಂಪ್ರದಾಯಿಕ ಶಿಲ್ಪಗಳ ಜೊತೆ ಈ ವಿದೇಶಿಗನ ಶಿಲ್ಪವನ್ನೂ ನಾವು ಕಾಣ್ಬಹುದು.

ಆಧುನಿಕ ಚರಿತ್ರಕಾರರ ಪ್ರಕಾರ- ಯೂರೋಪಿಯನ್ನರು ಮೊದಲು ಭಾರತಕ್ಕೆ ಕಾಲಿಟ್ಟಿದ್ದು 14ನೇ ಶತಮಾನದ ಅಂತ್ಯಭಾಗದಲ್ಲಿ, ಅಂದ್ರೆ 1498ರಲ್ಲಿ. ಸಮುದ್ರಯಾನದ ಮೂಲಕ ಬಂದಿಳಿದ ವಾಸ್ಕೋಡಿಗಾಮನೇ ಭಾರತಕ್ಕೆ ಭೇಟಿ ನೀಡಿದ ಮೊದಲ ಯೂರೋಪಿಯನ್ ಅಂತಾರೆ ಮಾಡ್ರನ್ ಹಿಸ್ಟೋರಿಯನ್​ಗಳು. ಆದ್ರೆ, ತಂಜಾವೂರಿನ ಈ ಬೃಹದೀಶ್ವರ ಮಂದಿರ ನಿರ್ಮಾಣವಾಗಿದ್ದು ಯಾವಾಗ ಗೊತ್ತಾ? ಕ್ರಿ.ಶ 1010ರಲ್ಲಿ,  ಅಂದ್ರೆ ವಾಸ್ಕೋಡಿಗಾಮ ಭಾರತಕ್ಕೆ ಕಾಲಿಡೋದಕ್ಕೂ 500 ವರ್ಷಗಳ ಹಿಂದೆ.  ಅಂದಹಾಗೆ, ವಾಸ್ಕೋಡಗಾಮ ಭಾರತಕ್ಕೆ ಬರೋದಕ್ಕೂ ನೂರಾರು ವರ್ಷಗಳ ಹಿಂದೆಯೇ ಈ ದೇಶಕ್ಕೆ ವಿದೇಶಿಗರು ಕಾಲಿಟ್ಟಿದ್ರು. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿರೋದು ಬೃಹದೀಶ್ವರ ಮಂದಿರದ ಮೇಲಿರೋ ಈ ವಿದೇಶಿಗನ ಶಿಲ್ಪ.
  
ಇಷ್ಟಕ್ಕೂ ಬೃಹದೀಶ್ವರ ಮಂದಿರದ ಮೇಲಿರೋ ಈ ವಿದೇಶಿಗನ ಶಿಲ್ಪವಾದ್ರೂ ಯಾರದ್ದು? ಈ ಬಗ್ಗೆ ಹಿಸ್ಟೋರಿಯನ್ ಗಳು ಏನ್ ಹೇಳ್ತಾರೆ? ಅನ್ನೋದನ್ನೂ ಸ್ವಲ್ಪ ಹೇಳ್ತೀವಿ ಕೇಳಿ. ಚರಿತ್ರಕಾರರ ಪ್ರಕಾರ- ಈ ಶಿಲ್ಪ ಅಂದಿನ ಪ್ರಾನ್ಸ್​ ರಾಜನಾಗಿದ್ದ ಈ 2ನೇ ರಾಬರ್ಡ್​ದು. ದೇಗುಲದ ಮೇಲಿರೋ ಈ ಶಿಲ್ಪಕ್ಕೂ, ಕ್ರಿ.ಶ 996ರಿಂದ 1031ರವರೆಗೆ ಪ್ರಾನ್ಸ್ ನ ರಾಜನಾಗಿದ್ದ ರಾಬರ್ಟ್​ಗೂ ತುಂಬಾನೇ ಸಾಮ್ಯತೆಯಿದೆ ಅಂತಾರೆ ಸಂಶೋಧಕರು. ಈ ಶಿಲ್ಪದಲ್ಲಿ ಟೋಪಿಯನ್ನ ಹೊರತುಪಡಿಸಿ ಮುಖದ ಮೇಲಿರೋ ಫ್ರೆಂಚ್ ಗಡ್ಡ, ನೀಳವಾದ ಉದ್ದನೆಯ ಮೂಗು, ತುಂಬುತೋಳಿನ ನಿಲುವಂಗಿ  ಹೀಗೆ ಪ್ರಾನ್ಸ್ ದೊರೆ 2ನೇ ರಾಬರ್ಟ್​ ನ ಎಲ್ಲ ಲಕ್ಷಣಗಳೂ ಈ ಶಿಲ್ಪದಲ್ಲಿವೆ ಅನ್ನೋದು ಸಂಶೋಧಕರ ವಾದ.

ವಿಶೇಷ ಅಂದ್ರೆ, ಸಂಶೋಧಕರ ಈ ವಾದಕ್ಕೆ ಪುಷ್ಟಿ ನೀಡೋದು ತಮಿಳುನಾಡಿನ ಪ್ರಸಿದ್ಧ ದೊರೆ ಈ ರಾಜರಾಜ ಚೋಳನ ಚರಿತ್ರೆ. ಅದು 10ನೇ ಶತಮಾನದ ಕಾಲಘಟ್ಟ. ಆ ಕಾಲಘಟ್ಟದ ತಂಜಾವೂರಿನ ಚರಿತ್ರೆಯ ಪುಟಗಳನ್ನ ತೆರೀತಾ ಹೋದ್ರೆ ಅಚ್ಚರಿಯ ಮಾಹಿತಿಗಳು ನಮ್ಗೆ ಸಿಗ್ತಾವೆ. ಆಗ ಚೋಳರ ಪ್ರಸಿದ್ದ ದೊರೆಯಾಗಿದ್ದ ರಾಜರಾಜ ಚೋಳ, 10ನೇ ಶತಮಾನದಲ್ಲೇ ವಿಶ್ವದ ಹಲವು ರಾಷ್ಟ್ರಗಳ ಜೊತೆ ವ್ಯಾಪಾರ ವಹಿವಾಟು ನಡೆಸಿದ್ದ ಕಥೆಗಳು ನಮ್ಮ ಮುಂದೆ ತೆರೆದುಕೊಳ್ತಾವೆ. ಒಂದು ಮೂಲದ ಪ್ರಕಾರ, ಈ ರಾಜರಾಜ ಚೋಳ, ಪ್ರಾನ್ಸ್ ದೊರೆ 2ನೇ ರಾಬರ್ಟ್​ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಅನ್ನುತ್ತೆ ತಮಿಳುನಾಡಿನ ಹಿಸ್ಟರಿ. ಆಗಿನ ಕಾಲಕ್ಕೆ ದಕ್ಷಿಣ ಭಾರತ ಮಾತ್ರವಲ್ಲ, ಶ್ರೀಲಂಕಾದಿಂದ ಹಿಡಿದು  ಉತ್ತರದ ಕಳಿಂದವರೆಗೆ ತನ್ನ ಸಾಮ್ರಾಜ್ಯ ವಿಸ್ತರಿಸಿದ್ದ ಈ ಚೋಳರ ದೊರೆ, ಸಮುದ್ರ ಮಾರ್ಗದ ಮೂಲಕ ಪ್ರಾನ್ಸ್ ಜೊತೆಗೂ ವ್ಯಾಪಾರ ಸಂಬಂಧ ಬೆಸೆದಿದ್ದ ಅಂದ್ರೆ ನಿಜಕ್ಕೂ ಅಚ್ಚರಿ ಎನಿಸುತ್ತೆ..

ಪ್ರಾನ್ಸ್ ದೇಶದ ಜೊತೆಗಿದ್ದ ವ್ಯಾಪಾರ ಸಂಬಂಧದ ಗುರುತಾಗಿ ರಾಜರಾಜ ಚೋಳ ಅಂದಿನ ಫ್ರಾನ್ಸ್ ದೊರೆಯಾಗಿದ್ದ 2ನೇ ರಾಬರ್ಟ್ ಚಿತ್ರವನ್ನ ಈ ಬೃಹದೀಶ್ವರ ಮಂದಿರ ಮೇಲೆ ಕೆತ್ತಿಸಿದ್ದ ಅನ್ನುತ್ತೆ ದೇಗುಲದ ಚರಿತ್ರೆ. ವಿಶೇಷ ಅಂದ್ರೆ, ಇದೇ ದೇಗುಲ ಮತ್ತೊಂದು ಬದಿಯಲ್ಲಿರೋ ವಿದೇಶಿಗನ ಶಿಲ್ಪವನ್ನೂ ನಾವ್ ನಿಮ್ಗೆ ತೋರಿಸ್ತೀವಿ ನೋಡಿ.  

ನೆಲಕ್ಕೆ ಬಾಗಿರೋ ಉದ್ದನೆಯ ಮೀಸೆ, ನೀಳವಾದ ಗಡ್ಡ ಹಾಗೂ ತಲೆಮೇಲೆ ಧರಿಸಿರೋ ವಿಚಿತ್ರ ಟೋಪಿ. ಇಂಥ ವಿಚಿತ್ರ ವೇಷಭೂಷಣ ಧರಿಸಿರೋ ಈಶಿಲ್ಪ ಚೀನಾ ರಾಜನದ್ದು ಅಂದ್ರೆ ನೀವೂ ನಂಬ್ಲೇಬೇಕು. ಹೌದು, 11ನೇ ಶತಮಾನದಲ್ಲಿ ಚೀನಾವನ್ನ ಆಳ್ವಿಕೆ ನಡೆಸ್ತಿದ್ದ ಜಿನ್ ರಾಜಮನೆತದ ಕಿಂಗ್ ಈತ. ಅಂದ್ರೆ 11ನೇ ಶತಮಾನದಲ್ಲೇ ರಾಜ ರಾಜ ಚೋಳ, ಪ್ರಾನ್ಸ್ ಮಾತ್ರವಲ್ಲ, ಚೀನಾದ ಜೊತೆಗೂ ಸಂಪರ್ಕ ಹೊಂದಿದ್ದ ಅನ್ನೋದಕ್ಕೆ ಈ ಚೀನಾ ರಾಜನ ಶಿಲ್ಪವೇ ಪ್ರತ್ಯಕ್ಷ ಸಾಕ್ಷಿ. ಅಂದ್ರೆ ಭಾರತೀಯ ರಾಜರು ಸಾವಿರ ವರ್ಷಗಳ ಹಿಂದೆಯೇ ವಿಶ್ವದ ಹಲವು ರಾಷ್ಟ್ರ ಜೊತೆ ಸಂಬಂಧ ಹೊಂದಿದ್ರು ಅನ್ನೋದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ನಮ್ಗೆ ಬೇಕಾ? 

ದುರಂತ ಅಂದ್ರೆ ಆಧುನಿಕ ಚರಿತ್ರೆ 1000 ವರ್ಷಗಳ ಹಿಂದೆಯೇ ಭಾರತ, ವಿಶ್ವದ ಯಾವ ದೇಶಗಳ ಜೊತೆಗೂ ಸಂಪರ್ಕ ಹೊಂದಿರಲಿಲ್ಲ. ಎನ್ನುತ್ತೆ. ಆದ್ರೆ ಈ ರಾಜರಾಜ ಚೋಳ ನಿರ್ಮಿಸಿದ ಈ ಬೃಹದೀಶ್ವರ ಮಂದಿರ,  10ನೇ ಶತಮಾನದಲ್ಲೇ ಭಾರತ ವಿಶ್ವದ ಎರಡು ಪ್ರಮುಖ ದೇಶಗಳ ಜೊತೆ ವ್ಯಾಪಾರಿ ಸಂಬಂಧ ಹೊಂದಿತ್ತು ಅನ್ನೋದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ.  ಅಷ್ಟೇಅಲ್ಲ, ವಿದೇಶಗಳನ್ನ ಸಂಪರ್ಕಿಸೋಕೇ ಬೇಕಾದ ನೌಕಾತಂತ್ರ ಜ್ಞಾನವೂ ಈ ದೇಶದ ರಾಜರಿಗೆ ತಿಳಿದಿತ್ತು ಇದರಿಂದಲೇ ನಮ್ಗೆ ಗೊತ್ತಾಗುತ್ತೆ.

ಭಾರತದ ದೇಗುಲಗಳಲ್ಲಿರೋ ವಿದೇಶಿಗರ ಶಿಲ್ಪಗಳು ಮಾತ್ರವಲ್ಲ, ಕೆಲವು ಪ್ರಾಣಿಗಳ ಶಿಲ್ಪಗಳೂ  ವಿಶ್ವ ಚರಿತ್ರೆಯ ಭಾಗಗಳೇ ಆಗಿವೆ. ಪ್ರಾಚೀನ ಮಂದಿರಗಳ ಗೋಡೆಗಳಲ್ಲಿರೋ ಆ ಪ್ರಾಣಿ ಶಿಲ್ಪಗಳು ಅಂದಿನ ಕಾಲಕ್ಕೆ ಭಾರತಕ್ಕಿದ್ದ ಬಾಂಧವ್ಯದ ಕಥೆಯನ್ನ ಹೇಳುತ್ವೆ.  

ಇದು ತಮಿಳುನಾಡಿನ  ಶ್ರೀರಂಗಂ ದೇಗುಲದ ಅಂಗಳದಲ್ಲಿರೋ 1000 ಸಾವಿರ ಕಂಬಗಳ ಮಂಟಪ. ಮುಗಿಲಿಗೆ ನೆಗೆದಂತೆ ಕೆತ್ತಿರೋ ಕುದುರೆಗಳ ಸಾಲು ಸ್ತಂಭಗಳು ಈ ಮಂಟಪದ ಪ್ರಮುಖ ಆಕರ್ಷಣೆ. ವಿಶೇಷ ಅಂದ್ರೆ ಶತಮಾನಗಳ ಹಿಂದೆಯೇ ಭಾರತದ ರಾಜರಿಗಿದ್ದ ವಿದೇಶಿ ಸಂಬಂಧಗಳ ಚರಿತ್ರೆಯೂ ಈ ಶಿಲಾಮಂಟಪದಲ್ಲಿದೆ ಅಂದ್ರೆ ನೀವು ನಂಬ್ತೀರಾ? ಹೌದು, ಭಾರತದ ವೈಭವದ ಚರಿತ್ರೆಯ ಭಾಗವೇ ಆಗಿರೋ ಈ ಶಿಲಾಮಂಟಪದಲ್ಲಿ, ಹಲವು ಅಚ್ಚರಿಗಳಿವೆ. 

ಎರಡೂ ಕಾಲುಗಳನ್ನೆತ್ತಿ ನಿಂತಿರೋ ಈ ಬೃಹತ್ ಕುದುರೆಯ ಕೆಳಭಾಗದಲ್ಲಿ 3 ಶಿಲ್ಪಗಳನ್ನು ಕೆತ್ತಿರೋದನ್ನ ನೀವಿಲ್ಲಿ ನೋಡ್ಬಹುದು. ಇಲ್ಲಿರೋ ಮೂರು ಶಿಲ್ಪಗಳನ್ನು ಸೂಕ್ಷ್ಮವಾಗಿ ಗಮನಿಸಿ, ಇವು ಸೈನಿಕರ ಶಿಲ್ಪಗಳು. ಈ ಮೂವರು ಪೈಕಿ ಹಿಂಬದಿಯಲ್ಲಿರೋದು ಚೀನಾ ದೇಶದ ಸೈನಿಕ. ಇಷ್ಟಕ್ಕೂ ಈ ಚೀನಾ ಸೈನಿಕ ಅನ್ನೋದನ್ನ ಹೇಗೆ ತಿಳಿಯೋದು ಅಂತ ನೀವು ಕೇಳ್ಬಹುದು. ಈತನ ಇಳಿಬಿದ್ದ ಮೀಸೆ, ಅಷ್ಟೇಅಲ್ಲ, ಈತನ ದಿರಿಸಿನಲ್ಲಿರೋ ಸಾಲು ಸಾಲು ಬಟನ್​ಗಳೇ ಸಾಕು ಈತನೊಬ್ಬ ಚೀನೀ ಸೈನಿಕ ಅಂತ ಗುರುತಿಸೋದಕ್ಕೆ. ಅದೇನೇ ಇರ್ಲಿ, ಈ ಚೀನೀ ಸೈನಿಕ, ತನ್ನ ಮುಂಭಾಗದಲ್ಲಿರೋ ಭಾರತೀಯರ ಸೈನಿಕನ ತೊಡೆಗೆ ಚೂರಿಯಿಂದ ಇರಿಯುತ್ತಿರುವಂತೆ ಇಲ್ಲಿ ಚಿತ್ರಿಸಲಾಗಿದೆ. ಅಷ್ಟೇಅಲ್ಲ, ಭಾರತೀಯ ಸೈನಿಕ ತನ್ನ ಮುಂದಿರೋ ಮತ್ತೊಬ್ಬ ಚೀನೀ ಸೈನಿಕನ ತೊಡೆಗೆ ಇರಿಯುತ್ತಿದ್ದಾನೆ.

ಹೀಗೆ ಈ ಮೂವರು ಸೈನಿಕರ ಪರಸ್ಪರಿ ಇರಿದುಕೊಳ್ತಿರೋ ಈ ವಿಚಿತ್ರ ವರ್ತನೆಯ ಹಿಂದಿರೋ ಗೂಢಾರ್ಥವೇನು? ತಿರುಚಿಯ ಈ ಶ್ರೀರಂಗಂ ದೇಗುಲಕ್ಕೂ ಚೀನಾ ಸೈನಿಕರಿಗೂ ಇರೋ ಸಂಬಂಧವಾದ್ರೂ ಏನು? ನಿಜಕ್ಕೂ ಇವತ್ತು ಸಂಶೋಧನೆಗೆ ಒಳಪಡಬೇಕಾಗಿರೋ ವಿಚಾರ ಇದು. ಇಷ್ಟಕ್ಕೂ ಈ ಶಿಲ್ಪವನ್ನ ಕೆತ್ತೋದಕ್ಕೆ ಭಾರತೀಯ ಶಿಲ್ಪಿಗೆ ಚೀನಾ ಸೈನಿಕರ ಸ್ಪಷ್ಟ ಕಲ್ಪನೆ ಇರಲೇಬೇಕಲ್ವಾ? ಚೀನಾದ ಸಂಪರ್ಕವಿಲ್ಲದೆ, ಅಂದಿನ ಚೀನಾ ಸೈನಿಕರ ವೇಷಭೂಷಣಗಳ ಅರಿವಿಲ್ಲದೆ ಇಂಥದೊಂದು ಕರಾರುವಾಕ್ ಶಿಲ್ಪವನ್ನ ಕೆತ್ತೋಕಾದ್ರೂ ಸಾಧ್ಯವಿದೆಯಾ? 

ವಿಶೇಷ ಅಂದ್ರೆ, ಶ್ರೀರಂಗಂ ದೇಗುಲದಲ್ಲಿರೋ ಈ ಶಿಲಾಮಂಟಪ ನಿರ್ಮಾಣವಾಗಿದ್ದು 6ನೇ ಶತಮಾನದಲ್ಲಿ. ಅಂದಹಾಗೇ, ಅಂದಿನ ಕಾಲಕ್ಕೇ ಮಧುರೈ ನಾಯಕರಿಗೆ, ಹಾಗೂ ಪಲ್ಲವ ಅರಸರಿಗೆ ಚೀನಾದ ಸಂಪರ್ಕ ಇತ್ತು ಅನ್ನೋದನ್ನ ಈ ಶಿಲ್ಪ ನಮ್ಗೆ ಸಾರಿ ಸಾರಿ ಹೇಳುತ್ತೆ. ಯಾಕೆಂದ್ರೆ, 6ನೇ ಶತಮಾನದಲ್ಲೇ ಆಧುನಿಕ ನೌಕೆಗಳ ಮೂಲಕ ಪಲ್ಲವ ರಾಜರು, ಕಾಂಬೋಡಿಯಾ ಹಾಗೂ ಇಂಡೋನೇಷ್ಯಾಗೆ ಹೋದ ಕಥೆಗಳು ನಮ್ಗೆ ಸಿಗ್ತಾನೆ. ಅಷ್ಟೇಅಲ್ಲ, ಪಲ್ಲವ ರಾಜರು, ಇಂಡೋನೇಷ್ಯಾದಿಂದ ಚೀನಾಗೂ ತಮ್ಮ ವ್ಯಾಪಾರ ಸಂಬಂಧವನ್ನ ವಿಸ್ತರಿಸಿದ್ರು ಅನ್ನುತ್ತೆ ಪಲ್ಲವರ ಚರಿತ್ರೆ..

ಅಚ್ಚರಿಯ ಸಂಗತಿ ಎನ್ ಗೊತ್ತಾ? ಈ ಚೀನಾ ಸೈನಿಕರ ಶಿಲ್ಪ ಮಾತ್ರವಲ್ಲ, ಶ್ರೀರಂಗಂನ ಈ ಶಿಲಾಮಂಟದಲ್ಲಿರೋ ಈ ಒಂಟೆಯ ಶಿಲ್ಪವೂ ಅಚ್ಚರಿಯ ಕಥೆ ಹೇಳುತ್ತೆ. ಅಂದಿನ ಕಾಲಕ್ಕೇ  ಭಾರತದ ರಾಜರಿಗಿದ್ದ ವಿದೇಶ ಬಾಂಧವ್ಯದ ಚರಿತ್ರೆಯನ್ನ ನಮ್ಮ ಮುಂದೆ ಬಿಚ್ಚಿಡುತ್ತೆ. ನಿಮ್ಗೆಲ್ಲ ಗೊತ್ತಿರೋ ಹಾಗೇ ಮರಳುಗಾಡಿನ ಹಡಗು ಅಂತಲೇ ಕರೆಸಿಕೊಂಡಿರೋ ಈ ಒಂಟೆಗಳ ಮೂಲ ಭಾರತವಲ್ಲ ! ಇಷ್ಟಕ್ಕೂ ಈ ಒಂಟೆಗಳು ಭಾರತಕ್ಕೆ ಬಂದಿದ್ದಾದ್ರೂ ಎಲ್ಲಿಂದ ಅಂತೀರಾ? ಒಂದು ಸಾವಿರ ವರ್ಷಗಳ ಹಿಂದೆ ಮಧ್ಯ ಏಷ್ಯಾ ರಾಷ್ಟ್ರಗಳಿಂದ ಒಂಟೆಗಳನ್ನ ಭಾರತಕ್ಕೆ ಆಮದು ಮಾಡಿಕೊಳ್ಳಲಾಯ್ತು ಅಂತಾರೆ ಇತಿಹಾಸ ಸಂಶೋಧಕರು. ಆದ್ರೆ ಶ್ರೀರಂಗಂ ಮಂಟದಲ್ಲಿರೋ ಈ ಒಂಟೆಯ ಶಿಲ್ಪವನ್ನ ಬಿಡಿಸಿರೋದು 1500 ವರ್ಷಗಳ ಹಿಂದೆ. ಅಂದಹಾಗೆ ಆಧುನಿಕ ಇತಿಹಾಸಕಾರರು ಬರೆದೆ ಚರಿತ್ರೆಗಿಂತಲೂ 500 ವರ್ಷಗಳ ಹಿಂದೆಯೇ ಈ ಶಿಲ್ಪಿಗಳಿಗೆ ಒಂಟೆಗಳ ಪರಿಕಲ್ಪನೆ ಇತ್ತು ಅನ್ನೋದು ಸಂಗತಿ ಈ ಒಂಟೆ ಶಿಲ್ಪದಿಂದಲೇ ನಮ್ಗೆ ಗೊತ್ತಾಗುತ್ತೆ..
  
ಇದು ಶ್ರೀರಂಗಂನಲ್ಲಿರೋ ಒಂಟೆ ಶಿಲ್ಪದ ಕಥೆಯಾದ್ರೆ, ಇನ್ನು ಒಡಿಶಾದ ಕೊನಾರ್ಕ್ ಮಂದಿರದಲ್ಲಿರೋ ಈ ಜಿರಾಫೆ ಶಿಲ್ಪದ ಕಥೆಯನ್ನೂ ಸ್ವಲ್ಪ ಹೇಳ್ತೀವಿ ಕೇಳಿ. ಆಫ್ರಿಕಾ ಜನರ ಗುಂಪೊಂದು ಭಾರತೀಯ ರಾಜನೊಬ್ಬರನ್ನು ಭೇಟಿ ಮಾಡ್ತಿರೋ ಸನ್ನಿವೇಶವನ್ನ ಈ ಶಿಲ್ಪದಲ್ಲಿ ಕೆತ್ತಲಾಗಿದೆ. ವಿಶೇಷ ಅಂದ್ರೆ, ಈ ಆಫ್ರಿಕನ್ನರ ಜೊತೆ ಅಲ್ಲಿ ಪ್ರಾಣಿ ಜಿರಾಫೆಯನ್ನೂ ಈ ಶಿಲ್ಪದಲ್ಲಿ ಚಿತ್ರಿಸಲಾಗಿದೆ. ಅಂದಹಾಗೆ ಒಡಿಶಾದ ಈ ಕೊನಾರ್ಕ್ ಮಂದಿರ ನಿರ್ಮಾಣವಾಗಿದ್ದು ಕ್ರಿ.ಶ 1250ರಲ್ಲಿ. ಅಂದ್ರೆ 750 ವರ್ಷಗಳ ಹಿಂದೆಯೇ ಭಾರತೀಯರಿಗೆ ಆಫ್ರಿಕಾ ಸಂಸ್ಕೃತಿಯ ಪರಿಚಯ ಇದ್ದಿರಬಹುದು ಅನ್ನೋ ಮಾಹಿತಿಯನ್ನ ಈ ಶಿಲ್ಪ ನಮ್ಗೆ ನೀಡುತ್ತೆ. ಅಷ್ಟೇಅಲ್ಲ, ಆಫ್ರಿಕಾದಲ್ಲೊಂದು ವ್ಯವಸ್ಥಿತ ಜನಜೀವನವೇ ಇರಲಿಲ್ಲ ಅಂತ ಹೇಳೋ ಆಧುನಿಕ ಚರಿತ್ರಕಾರರಿಗೂ ಈ ಶಿಲ್ಪ ಸ್ಪಷ್ಟ ಉತ್ತರ ನೀಡುತ್ತೆ. ಹೀಗೆ ದೇಗುಲಗಳ ಗೋಡೆಯ ಮೇಲಿರೋ ಸಾಲು ಸಾಲು ಶಿಲ್ಪಗಳು ವಿಶ್ವ ಚರಿತ್ರೆಯ ಕಥೆ ಹೇಳುತ್ವೆ. ಭಾರತದ ಪ್ರಾಚೀನ ಮಂದಿರಗಳು, ಬರೀ ಧಾರ್ಮಿಕ ಕೇಂದ್ರಗಳಾಗಿರ್ಲಿಲ್ಲ, ವಿಶ್ವ ಚರಿತ್ರೆಯ ಭಾಗಗಳೂ ಆಗಿದ್ವು ಅನ್ನೋದನ್ನ ಸಾರಿ ಸಾರಿ ಹೇಳುತ್ವೆ. 

Thursday, 19 October 2017

ರಹಸ್ಯ ಸೃಷ್ಟಿ

ಅಂಬೆಗಾಲು; ಎಡವಿದ ಕಾಲು 
ರೆಕ್ಕೆ ಬಲಿತರೆ ಮುಗಿಲು
ಗುಲಗಂಜಿ ಬೀಜ ಟಿಸಿಲೊಡೆದು ಬೇರೂರಿ,
ಮೋಡಗಳ  ಚುಂಬಿಸೆ ವರ್ಷಧಾರೆ!
ಅಣು ಅಣುವೂ; ಕಣ ಕಣವೂ ಶಕ್ತಿಯ ಒರತೆ
ತಬ್ಬಿ ಹಬ್ಬುವ ಲತೆ; ಮರ ಬಿಗಿವ ಪಾಶ!

ಬೀಜ ಸತ್ತರೆ ವೃಕ್ಷ ;  ಮರ ಮರಣಿದರೆ ಬೀಜ
ರೂಪ ಬದಲಿಸುವ  ಪ್ರಕೃತಿಯಾಟದಲಿ
ಇಲ್ಲವಾಗುವುದು ಬೀಜವೋ? ಮರವೋ?!
ಬಗೆಹರಿಯದ ಬೀಜ-ವೃಕ್ಷ ನ್ಯಾಯ

ಮೌನ ಮುರಿದರೆ ಮಾತು; ಮಾತು ಮುಗಿದರೆ ಮೌನ
ಶಬ್ದಕ್ಕೆ ನಿಲುಕದ; ಮೌನಕ್ಕೆ ಸಿಲುಕದ ಪ್ರಕೃತಿಯ
ಮೌನದಲಿ ಮಾತೋ; ಮಾತಿನಲಿ ಮೌನವೋ?

ಬಣ್ಣ ಬಣ್ಣದ ಪಾತ್ರ ಬದಲಿಸುವ
ಪಾತರಗಿತ್ತಿಯ ತತ್ತಿಯೊಳಗೆ ಜಗದ ನಾಟಕ
ಕ್ರಿಯೆಗೆ ಪ್ರತಿಕ್ರಿಯೆ; ದನಿಗೆ ಮಾರ್ದನಿ
ಎರಡೊಂದಾಗುವ ಸೃಷ್ಟಿ, ನಿಗೂಢ ರೂಪಕ

Thursday, 29 June 2017

ಇಲ್ಲಿ ಹೋರಿಗಳೂ ಜಿಮ್ ಮಾಡ್ತಾವೆ!

 


ಇತ್ತೀಚೆಗಂತೂ ಯಂಗ್ ಜನರೇಷನ್ನಲ್ಲಿ ಸಿಕ್ಸ್ತ್ ಪ್ಯಾಕ್ ಬಗ್ಗೆ ಇನ್ನಿಲ್ಲದ ಕ್ರೇಜ್ ಇದೆ. ಇದಕ್ಕಾಗಿ ದಿನಕ್ಕೆ 2-3 ಗಂಟೆಗಳ ಕಾಲ ವರ್ಕ್ಔಟ್ ಮಾಡ್ತಾರೆ. ಬಾಡಿ ಬಿಲ್ಡಪ್ಗಾಗಿಯೇ ಅನೇಕ ಆಧುನಿಕ ಜಿಮ್ಗಳೂ ಈಗ ದಿನೇದಿನೇ ಜಾಸ್ತಿ ಆಗ್ತಿವೆ. ಅಷ್ಟೇ ಅಲ್ಲ, ಏರೋಬಿಕ್ಸ್, ಹೀಟ್ಯೋಗ.. ನೂಡ್ಯೋಗ... ಹೀಗೆ ತಮ್ಮ ಅಂಗಸೌಷ್ಠವ ಕಾಪಾಡಿಕೊಳ್ಳೋಕೆ ಯುವಜನತೆ ಹತ್ತು ಹಲವು ಕಸರತ್ತುಗಳನ್ನು ಮಾಡ್ತಾರೆ.

ಇದರಲ್ಲೇನು ವಿಶೇಷ ಅಂತ ನೀವು ಕೇಳಬಹುದು. ಯಂಗ್ ಜನರೇಷನ್ ಜಿಮ್ಗಳಲ್ಲಿ ವರ್ಕ್ಔಟ್ ಮಾಡೋದು ಹೊಸ ವಿಚಾರವೇನೂ ಅಲ್ಲ ಬಿಡಿ, ಆದ್ರೆ ತಮ್ಮ ಅಂಗಸೌಷ್ಠವ ಕಾಪಾಡಿಕೊಳ್ಳೋಕೆ ಹೋರಿಗಳೂ ಜಿಮ್ ಮಾಡ್ತಾವೆ ಅಂದ್ರೆ ನೀವು ನಂಬಲೇಬೇಕು! ಹೌದು, ಆಂಧ್ರದ ಕರ್ನೂಲ್ನಲ್ಲಿರೋ ರಾಷ್ಟ್ರೀಯ ಡೈರಿ ರೀಸರ್ಚ್ ಇನ್ಸ್ಸ್ಟಿಟ್ಯೂಟ್ನಲ್ಲಿರೋ ಹೋರಿಗಳು ಮತ್ತು ಕೋಣಗಳು ವಾರಕ್ಕೆ 2 ಗಂಟೆಗಳ ಕಾಲ ತಮ್ಮ ಮೈ ದಂಡಿಸಿ, ಬೆವರಿಸಲೇಬೇಕು!

ಹೋರಿ, ಎಮ್ಮೆಗಳಿಗೂ ವ್ಯಾಯಾಮ ಮಾಡಿಸೋ ಕರ್ನೂಲ್ ರಾಷ್ಟ್ರೀಯ ಡೈರಿ ರೀಸರ್ಚ್ ಇನ್ಸ್ಸ್ಟಿಟ್ಯೂಟ್ ಸ್ಪೆಷಾಲಿಟಿಯ ಬಗ್ಗೆಯೂ ಸ್ವಲ್ಪ ನಿಮಗೆ ಹೇಳಬೇಕು. ಅಂದಹಾಗೆ ಇಲ್ಲಿ ವಿಶೇಷವಾಗಿ ಹಸು, ಎಮ್ಮೆ, ಮೇಕೆ, ಕುರಿಗಳ ವಿಶೇಷ ತಳಿಗಳನ್ನು ಸೃಷ್ಟಿಸಲಾಗ್ತಿದೆ.

ನಿಮಗೆ ನೆನಪಿರಬಹುದು, ಎಡಿನ್ಬರ್ಗ್ ಯುನಿವರ್ಸಿಟಿಯ ವಿಜ್ಞಾನಿಗಳು 1996ರಲ್ಲಿ ತದ್ರೂಪಿ ಕುರಿಯೊಂದನ್ನು ಸೃಷ್ಟಿಸಿದ್ರು. ವಿಶ್ವದ ಮೊದಲ ಕ್ಲೋನಿಂಗ್ ಕುರಿಮರಿಗೆ `ಡಾಲಿಅಂತಲೂ ಹೆಸರಿಟ್ಟಿದ್ರು. ಡಾಲಿ ಅನ್ನೋ ಕ್ಲೋನಿಂಗ್ ಕುರಿ ಮರಿಯ ಬಗ್ಗೆ ಸಾಕಷ್ಟು ಪರ-ವಿರೋಧದ ಹೇಳಿಕೆಗಳೂ ಆಗ ಕೇಳಿಬಂದಿದ್ವು. ಇದೇ ಕಾರಣಕ್ಕೆ `ಡಾಲಿವಿಶ್ವದಾದ್ಯಂತ ಸಾಕಷ್ಟು ಹೆಸರಾಗಿತ್ತು.

ಆದ್ರೆ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ, ವಿಶ್ವದ ಮೊದಲ ಕ್ಲೋನಿಂಗ್ ಎಮ್ಮೆ ಕರು ಸೃಷ್ಟಿಸಿದ್ದು ಕರ್ನೂಲ್ ಇಂಡಿಯನ್ ಡೈರಿ ರೀಸರ್ಚ್ ಇನ್ಸ್ಸ್ಟಿಟ್ಯೂಟ್ ವಿಜ್ಞಾನಿಗಳು!  ಹೌದು, 2009ರಲ್ಲಿ ಇಲ್ಲಿನ ವಿಜ್ಞಾನಿಗಳು, ಐವಿಎಫ್ ವಿಧಾನದ ಮೂಲಕ ವಿಶ್ವದ ಮೊದಲ ಕ್ಲೋನಿಂಗ್ ಎಮ್ಮೆ ಕರುವನ್ನು ಸೃಷ್ಟಿಸಿ ದಾಖಲೆ ನಿರ್ಮಿಸಿದ್ರು. ತಾವು ಸೃಷ್ಟಿಸಿದ ತದ್ರೂಪಿ ಎಮ್ಮೆ ಕರುವಿಗೆ `ಸಂಪುರಅಂತ ಹೆಸರಿಟ್ಟಿದ್ರು.

ಇಷ್ಟಕ್ಕೂ ಇಂಡಿಯನ್ ಡೈರಿ ರೀಸರ್ಚ್ ಇನ್ಸ್ಸ್ಟಿಟ್ಯೂಟ್ನಲ್ಲಿ ಯಾಕೆ ಹೋರಿಗಳು ಮತ್ತು ಕೋಣಗಳಿಗೆ  ವ್ಯಾಯಾಮ ಮಾಡ್ತಿಸ್ತಾರೆ. ಅಂದಹಾಗೆ, ಹೊಸ ಹೊಸ ತಳಿಗಳ ಸಂವರ್ಧನೆಗೆ ಆರೋಗ್ಯಕರ ಹಾಗೂ ಅತ್ಯುತ್ತಮ ವೀರ್ಯ ಬೇಕಾಗುತ್ತೆ.. ಹೀಗಾಗಿ ಇಲ್ಲಿನ ಹೋರಿಗಳು ಮತ್ತು ಕೋಣಗಳು ವಾರಕ್ಕೆ 2 ಗಂಟೆಗಳ ಕಾಲ ಮೈನಲ್ಲಿ ಬೆವರಿಳಿಸಲೇಬೇಕು!

ಹೋರಿಗಳು ಮತ್ತು ಕೋಣಗಳು ಜಿಮ್ ಮಾಡೋಕೆ ಅಂತಲೇ ಇನ್ಸ್ಸ್ಟಿಟ್ಯೂಟ್ನಲ್ಲಿ ವಿಶೇಷ ರೀತಿಯಲ್ಲಿ ವಿನ್ಯಾಸ ಮಾಡಿರೋ ಜಿಮ್ ಇದೆ! ಅನಿಮಲ್ ಜಿಮ್ನಲ್ಲಿ ಹೋರಿಗಳು ಮತ್ತು ಕೋಣಗಳು ವಾರಕ್ಕೆ ಎರಡು ಗಂಟೆ ವಾಕ್ ಮಾಡಲೇಬೇಕು.  ಹೀಗೆ ಜಿಮ್ನಲ್ಲಿ ಬೆವರಿಳಿಸುವ ಹೋರಿ ಮತ್ತು ಕೋಣಗಳಿಂದ ವಾರಕ್ಕೆರಡು ಬಾರಿ ವೀರ್ಯವನ್ನು ಸಂಗ್ರಹಿಸಿ, ತಳಿ ಅಭಿವೃದ್ಧಿಗೆ ಬಳಸಲಾಗುತ್ತೆ. 

Friday, 7 October 2016

ಕಾಣದ ದಾರಿಯಲಿ..


ಭ್ರಮೆಯ ಪರದೆ ಸರಿಸಿ ನೋಡು
ವಾಸ್ತವದ ಕನ್ನಡಿ
ಗುರಿ ಇರದ ದಾರಿಯಲಿ
ಹೊಸ ಬದುಕಿನ ಮುನ್ನುಡಿ
ಬರೆಯಲೇನು ಮರಳ ಬರಹ?
ಮರುಭೂಮಿಯ ನೆರಳದು!
ಕುಡಿಯಲೇನು ಮೃಗಜಲವಾ
ದಾಹ ನೀಗದು
ಹಿಡಿಯಲೇನು ಮನ ಪತಂಗ
ಮಕರಂದವ ಸವಿಯದು!
ಮಿಡಿವುದೇನು ಹರಿದ ತಂತಿ
ನಾದವೆಂದು ಕೇಳದು

Thursday, 29 September 2016

ಒಂಟಿತನದೃಷ್ಟಿಯೊಂದೇ ನೋಡುವ ಕಣ್ಣುಗಳೆರಡು
ಶಬ್ದವೊಂದೇ; ಕೇಳುವ ಕಿವಿಗಳೆರಡು
ಕೈಗಳೆರಡು; ನಡೆದಾಡುವ ಕಾಲುಗಳೂ ಎರಡು
ಕಾಲಿಗೂ ಜೋಡೆರಡು
ನಾಸಿಕ ಒಂದಾದರೂ ಉಸಿರೆಳೆವ ಹೊಳ್ಳೆಗಳೆರಡು
ಒಂದೇ ಶಿರದ ಕೇಶಗಳು ಸಹಸ್ರ ಸಹಸ್ರ
ದಂತದ ಇರುವೆಗಳು, ಸಾಲು ಸಾಲು!
ಬಾಯಿಯೋ ಏಕಾಂಗಿ!
ಅದರೊಳಗಿರುವ ನಾಲಿಗೆಯೂ ಒಬ್ಬಂಟಿ
ಭಗವಂತ ಅದೆಂಥ ಪಕ್ಷಪಾತಿ!
ನಾಲಿಗೆ, ಬಾಯಿಗೆ ಹೇಳಿತು
ನೀ ನನ್ನ ಜೋಡಿಯಾಗು
ಮುದ್ದಾದ ಮಾತು ಹುಟ್ಟಲಿ!
ಆಗ ನಮ್ಮಿಬ್ಬರ
ಒಂಟಿತನ ದೂರಾದೂರ!

Monday, 19 September 2016

ಕುಲವಾವುದಯ್ಯಾಕುಲವಾವುದಯ್ಯಾ
ನಿನ್ನ ಮೂಲವಾವುದಯ್ಯಾ?

ಸ್ವಚ್ಛ ಬಿಳಿಗೆಡ್ಡೆ ಮೈಯೆಲ್ಲಾ ಸುವಾಸನೆ
ಲಷುಣ ಕಂಡರೆ ಮೂಗು ಮುರಿಯುವ;
ಮಡಿಯುಟ್ಟು ಮಾರುದ್ಧ ಹಾರುವವ;
ಕಚ್ಚೆ ಕಟ್ಟದೆ; ಒದ್ದೆ ದಟ್ಟಿಯನುಟ್ಟು
ಮೂಗು ಹಿಡಿದು ಒಟಗುಟ್ಟಿದರೆ
ಕೈಗೆಟುಕುವುದೇ ಕೈಲಾಸ; ಕಾಣುವುದೇ ವೈಕುಂಠ?
ಲಲಾಟದಲ್ಲಿ ಉದ್ದುದ್ದ, ಅಡ್ಡಡ್ಡ ಗೆರೆ ಎಳೆದು
ಹರಿ-ಹರನಲ್ಲಿ ಭೇದವೆಣಿಸುವ ಮೂಢರೆಷ್ಟು
ಮುಕ್ತಿ ಪಡೆದರು?!

ಮಣ್ಣ ಮಡಿಲಲ್ಲಿ ಮಡಿ ಮಾಡಿ
ಮಹೌಷಧ ಬೆಳೆವ ಭೂತಾಯ ಒಕ್ಕಲು
ನೆಲವೆಂಬ ಲಲಾಟದಲಿ ನೇಗಿಲ ಗೆರೆ ಎಳೆದು
ನಾನು ನಾಮ; ನೀನು ವಿಭೂತಿ ಎಂದು
ಜರಿದುಕೊಳ್ಳುವ ಭಂಡರಿಗೆಲ್ಲ
ಅನ್ನವಿಕ್ಕುವವ ಕುಲಜನಲ್ಲವೇ?
ಶವ ಕರ್ಪಟದ ಎಳೆ ಬಿಡಿಸಿ,
ಸಹಸ್ರ ಸಹಸ್ರ ನೂಲುಗಳ ಜೋಡಿಸಿ
ಶ್ರಮವೆಂಬ ಭಕ್ತಿ, ಏಕಾಗ್ರತೆಯ ಬೆರೆಸಿ
ಮಾನವಂತರ ಮಾನ ಮುಚ್ಚುವವ ಕುಲಜನಲ್ಲವೇ?