Monday 19 September 2016

ಕುಲವಾವುದಯ್ಯಾ



ಕುಲವಾವುದಯ್ಯಾ
ನಿನ್ನ ಮೂಲವಾವುದಯ್ಯಾ?

ಸ್ವಚ್ಛ ಬಿಳಿಗೆಡ್ಡೆ ಮೈಯೆಲ್ಲಾ ಸುವಾಸನೆ
ಲಷುಣ ಕಂಡರೆ ಮೂಗು ಮುರಿಯುವ;
ಮಡಿಯುಟ್ಟು ಮಾರುದ್ಧ ಹಾರುವವ;
ಕಚ್ಚೆ ಕಟ್ಟದೆ; ಒದ್ದೆ ದಟ್ಟಿಯನುಟ್ಟು
ಮೂಗು ಹಿಡಿದು ಒಟಗುಟ್ಟಿದರೆ
ಕೈಗೆಟುಕುವುದೇ ಕೈಲಾಸ; ಕಾಣುವುದೇ ವೈಕುಂಠ?
ಲಲಾಟದಲ್ಲಿ ಉದ್ದುದ್ದ, ಅಡ್ಡಡ್ಡ ಗೆರೆ ಎಳೆದು
ಹರಿ-ಹರನಲ್ಲಿ ಭೇದವೆಣಿಸುವ ಮೂಢರೆಷ್ಟು
ಮುಕ್ತಿ ಪಡೆದರು?!

ಮಣ್ಣ ಮಡಿಲಲ್ಲಿ ಮಡಿ ಮಾಡಿ
ಮಹೌಷಧ ಬೆಳೆವ ಭೂತಾಯ ಒಕ್ಕಲು
ನೆಲವೆಂಬ ಲಲಾಟದಲಿ ನೇಗಿಲ ಗೆರೆ ಎಳೆದು
ನಾನು ನಾಮ; ನೀನು ವಿಭೂತಿ ಎಂದು
ಜರಿದುಕೊಳ್ಳುವ ಭಂಡರಿಗೆಲ್ಲ
ಅನ್ನವಿಕ್ಕುವವ ಕುಲಜನಲ್ಲವೇ?
ಶವ ಕರ್ಪಟದ ಎಳೆ ಬಿಡಿಸಿ,
ಸಹಸ್ರ ಸಹಸ್ರ ನೂಲುಗಳ ಜೋಡಿಸಿ
ಶ್ರಮವೆಂಬ ಭಕ್ತಿ, ಏಕಾಗ್ರತೆಯ ಬೆರೆಸಿ
ಮಾನವಂತರ ಮಾನ ಮುಚ್ಚುವವ ಕುಲಜನಲ್ಲವೇ?

No comments:

Post a Comment