ಯಾವುದು ಯಶಸ್ಸಿನ ಕೀಲಿ ಕೈ?
ಜಾತಿ, ಹಣ, ಅಂತಸ್ತು
ಸಾಧನೆ, ಪರಿಶ್ರಮ...
ಜಾತಿಯ ಸಂಕೋಲೆಯೊಳಗೆ...
ದುಡ್ಡಿನ ಪ್ರಭಾವದೊಳಗೆ...
ಅಂತಸ್ತಿನ ಹಮ್ಮು ಬಿಮ್ಮಿನೊಳಗೆ ಬೀಗ ಬೆಸೆದಾಗ
ಬಂಧಿಯಾದಾಗ...
ಸಾಧನೆ ಸವೆದ ಕೀಲಿ ಕೈ
ಬಾಗಿಲಿಗೊಂದು, ಬೀರುವಿಗೊಂದು...
ಬೈಕಿಗೊಂದು, ಕಾರಿಗೊಂದು, ಬಸ್ಸಿಗೊಂದು..
ಮುಚ್ಚಲು, ತೆರೆಯಲು, ಓಡಿಸಲು, ನಿಲ್ಲಿಸಲು
ಕೀಲಿಯೇ ಸಾಧನ
ಬೀರುವಿನದು ಬಾಗಿಲಿಗೆ, ಬಾಗಿಲಿನದು ಬೀರುವಿಗೆ
ಬೈಕಿನದು ಕಾರಿಗೆ, ಬಸ್ಸಿಗೆ
ಬಸ್ಸಿನದು ಟ್ರಾಕ್ಟರ್‌ಗೆ, ಲಾರಿಗೆ...
ಜೀವನ ಸಾಧ್ಯತೆಗಳ ಮುಚ್ಚಿಬಿಡುತ್ತದೆ
ತಪ್ಪು ನಿರ್ಧಾರದ ಬೀಗದ ಕೈ
ನೂರಾರು ಬದುಕಿನ ಮಾರ್ಗಗಳೊಳಗೆ
ಆಯ್ಕೆ ಒಂದಿರಲಿ
ಮನಸ್ಸಿದ್ದರೆ ಮಾರ್ಗ ತೆರೆಯಲೂಬಹುದು
ಮನಸ್ಸಿಲ್ಲದೆ ಮುಚ್ಚಲೂಬಹುದು
ಎರಡು ಸಾಧ್ಯತೆಗಳ ಕೇಂದ್ರ ಬಿಂದು
ಕೀಲಿ ಕೈ
ಹೆಂಡತಿ ಗಂಡನ ಕೈಯ ಸೂತ್ರಬೊಂಬೆ
ಪತ್ನಿ ಕೈಲಿ ಪತಿಯ ಕೀಲಿ ಕೈ
ಮಾಲಿಯ ಕೈಯಲಿ ಹಮಾಲಿ ಬದುಕು
ತೆರೆದು ಮುಚ್ಚುವ, ಹಾಕಿ ತೆಗೆಯುವ
ಆಟಕ್ಕೆ ಕೀಲಿ ಕೈ ಸಾಧನ
ಕೋಟಿ ಕೋಟಿ ಸಂಪತ್ತಿಗೆ ಅಕ್ರಮದ ಬೀಗ
ಮನೆಯಲೆಲ್ಲೂ ಇಲ್ಲ ಇಂಚಿಂಚೂ ಜಾಗ
ಪಾರಾಗಲೆಂತು ಸುಲಭ ಮಾರ್ಗ
ಭ್ರಷ್ಟರ ಲಾಕರ್‌ಗಳಿಗೆ
ಕಾನೂನಿನ ಕೀಲಿ ಇರುವಾಗ...
No comments:
Post a Comment