Tuesday 28 May 2013

ಅನ್ನದ ಅರಿವು


 ಅಂಗಲಾಚಿದ, ಬೇಡಿ ಕಾಡಿದ
 ಎಲೆಯಲ್ಲಿ ಅಂಟಿದ ಮಣ್ಣ ಲೆಕ್ಕಿಸದೆ
 ಗಬಗಬನೆ ತಿಂದು ಮುಗಿಸಿದ

 ಅದು ಹಸಿವಿನ ವಿರಾಟ್ ದರ್ಶನ
 ಸಾವಿನ ರುದ್ರನರ್ತನ, ತಾಂಡವ ಪ್ರದರ್ಶನ
 ಅಬ್ಬಾ! ಗಂಟಲಿಗೆ ಇಳಿದರೆ ತುತ್ತು ಅನ್ನ
 ಪ್ರಾಣಾಪಾನ, ಉದಾನ, ಸಮಾನ ವ್ಯಾನ ಸಮಾಧಾನ
 ಸಂತೃಪ್ತ ಆತ್ಮನ್ ಪ್ರಾಣ, ಜೀವನ

 ಮನೆ-ಮಠ, ಹೆಂಡತಿ- ಮಕ್ಕಳು
 ಅಪ್ಪ- ಅಮ್ಮ, ಅಣ್ಣ- ತಂಗಿ
 ಆಸ್ತಿ- ಅಂತಸ್ತು, ಕುಲ-ಗೋತ್ರ
 ಹುಚ್ಚನಿಗೆ ಇದೆಲ್ಲದರ ಗಾಢ ಮರೆವು
 ಮನದಾಚೆಗೆ ಎಲ್ಲ ನೋವು
 ಆದರೂ ಇದೆ ಹಸಿವಿನ ಅರಿವು
 ಅನ್ನದ ಒಲವು, ಬಲವು

 ಹೂ ಅರಳುವುದು ಮಣ್ಣಿನ ಗುಣ
 ಪ್ರಾಣ ಉಳಿಸುವುದು ಅನ್ನದ ಋಣ
 ಸಸ್ಯರಾಶಿಗೆ ಆಧಾರ ಬೇರು
 ಶರೀರ ಭಾರ ಹೊರಲಾರದು
 ತ್ರಾಣವಿಲ್ಲದ ಊರು

 ಅನ್ನದ ಮಹತ್ ಅದೆಂಥದಣ್ಣ?
 ಅನ್ನ ಮಣ್ಣಲ್ಲಿ ದೊರೆವ ಚಿನ್ನ

No comments:

Post a Comment