Saturday 13 July 2013

ಬಿಳಲು ಕುಕ್ಕಿದ ಮರಕುಟಿಗ



ಸಮಾಧಿಯಿಂದ ದಿಗ್ಗನೆದ್ದ
ಶಾಂತಿದೂತ ಬುದ್ಧ
ಒಮ್ಮೆ ನಕ್ಕ
ಮತ್ತೆ ಸಮಾಧಿ ಹೊಕ್ಕ

ಸಿಡಿದ ಬಾಂಬಿಗೆ ಬೆದರಲಿಲ್ಲ
ಬೋಧಗಯಾ ಛಿದ್ರಗೊಳ್ಳಲಿಲ್ಲ
 ಸೀಳಬಹುದೇ ಸಲಿಲ?
ಜ್ಞಾನ ಅವಿಚ್ಛಿನ್ನ!

ಬೋಧಿ ವೃಕ್ಷದ ಪೊಟರೆಯೊಳಗೆ
ಅಶಾಂತಿಯ ಹಕ್ಕಿ
ಬಿಳಲು ಕಡಿದರೆ ಮತ್ತೊಂದು
ಬೇರೂರುವ ಆಲದ ಬೀಜ ತಿಂದ
  ಮರಕುಟಿಗನ ಹಿಕ್ಕೆಯಲ್ಲೂ 
ಅರಳಿಯಾಗಿ ಅರಳುವ ಬುದ್ಧ

ಬಾಂಬು, ಬಂದೂಕಿನ ತುದಿಯಲ್ಲಿ
ಅಜ್ಞಾನದ ಅರಮನೆ
ದ್ವೇಷ, ಅಸೂಯೆ ಬೇಡಿ ತೊಟ್ಟ
ಮನ ಸೇರಿತು ಸೆರೆಮನೆ


ರೈಲು ಹಳಿಗಳ ಮೇಲೆ
ಗೌತಮನ ಮಹಾಯಾನ
ಉಗ್ರನ ಹೀನ ಪಯಾಣ
 ಸೇರದ ಗುರಿ, ಎತ್ತಲೋ ದಾರಿ

ಹಾದಿ ಹುಡುಕಿದ ಸಿದ್ಧಾರ್ಥ 
ಮಧ್ಯಮಮಾರ್ಗದಿ ಕಂಡ ಪರಮಾರ್ಥ
ಹರಿಸೆ ರಕ್ತದೋಕುಳಿ ವ್ಯರ್ಥ
ನಕ್ಕು ನುಡಿದ ಇದ್ಯಾವ ಪುರುಷಾರ್ಥ

ಮಣಿದ ಶಾಂತಿಗೆ, ಮನಸೋತ ನಗುವಿಗೆ
ಅವಯವಗಳ ಆಭರಣ ಶೂರ 
ಧೀರ ಅಂಗುಲೀಮಾಲ 
ದಿಕ್ಕು ಬದಲಿಸಲಿಲ್ಲ ನಿನ್ನ ಮನ 
ಸ್ಫೋಟಕಗಳ ರುಂಡಮಾಲ

ಪ್ರತೀಕಾರಕೆ ನಮಸ್ಕಾರ
ತಿರಸ್ಕಾರಕೆ ಪುರಸ್ಕಾರ
ಶಾಂತಿ ಗುಡಿಯೊಳಗೆ
ಓಂಕಾರದ ಹೂ ನಳನಳಿಸಿದೆ
ಅಲ್ಲಿ ಬುದ್ಧ ನಗುವಿದೆ

ಬಿರುಗಾಳಿಯ ವಿಮಾನ ಏರಿ
ಸುತ್ತಿಸುಳಿವ ಮರಳ ಗೋರಿ
ಒಂಟೆ ಏರಿ ನಡೆವ ದಾರಿ
ಓಂುಸಿಸ್‌ನಲ್ಲೂ ಬುದ್ಧನ ಜಲತರಂಗ

No comments:

Post a Comment