Wednesday 17 July 2013

ಸಂಬಂಧಗಳ ಸರಪಳಿ



ದೂರ ಸೂಚಕ ಮೈಲಿಗಲ್ಲುಗಳು
ಬಾಳ ಹಾದಿಯಲಿ ಸಂಧಿಸುವ ಸಂಬಂಧಗಳು
ದಾರಿ ಸವೆದಂತೆ, ಸ್ಮತಿ ಸರಿದಂತೆ
ಕಾಲಗರ್ಭ ಸೇರುವ ಪಳೆಯುಳಿಕೆಗಳು
ಹೊತ್ತಗೆಯ ಮಗುಚಿದ ಪುಟಗಳೊಳಗೆ
ವಂಶವೃಕ್ಷಗಳು!

ನಾಡಿಶಾಸ್ತ್ರಕೆ ಭೂತಗನ್ನಡಿ ಹಿಡಿದು
ತಲೆಮಾರುಗಳ ಹೆಕ್ಕಿ ತೆಗೆದು
ವರ್ತಮಾನ, ಸಮಸ್ಯೆ, ಸಂಬಂಧಗಳ ಲೆಕ್ಕಾಚಾರ
ಏಳೇಳು ಜನುಮಗಳ ಗುಣಾಕಾರ, ಭಾಗಾಕಾರ
ನೆಲೆ ಅರಿಯದ ಕುಲ-ಗೋತ್ರಗಳು
ಮೃಗಜಲ, ಕನ್ನಡಿಯ ಗಂಟು

ರಾಜಸ್ತಾನ ರಾಜವರ್ಮನ
ಪುನರ್ಜನ್ಮ ಬೆಂಗಳೂರು
ಪೂರ್ವದ ಮಣ್ಣಿನಲಿ
ಬ್ರಿಟನ್ ರಾಜಕುವರನ ಮೂಲಬೇರು
ನೂರಾರು ಬಂಧ, ಅನುಬಂಧಗಳ
ಕಥೆಗಳು ಅದೆಷ್ಟೋ?

ಹುಡುಕ ಹೊರಟ ಹಾದಿಯಲಿ
ಮತ್ತದೇ ಸಂಬಂಧಗಳ ಕರುಳ ಬಳ್ಳಿ
ಋಣಾನುಬಂಧದ ಸರಪಳಿ
ನಡೆದಷ್ಟೂ ದೂರ ಬೆಸೆಯುತ್ತಲೇ ಇದೆ
ಸಂಧಿಸುತ್ತಲೇ ಇವೆ
ಹೊಸ ಹೊಸ ಸಂಬಂಧಗಳ
ಮೈಲಿಗಲ್ಲುಗಳು...!
ಮೊಗೆದಷ್ಟು, ಬಗೆದಷ್ಟು ತೇಲುತ್ತಲೇ ಇವೆ
ಅಸ್ಥಿಪಂಜರ, ಗೋರಿಗಳು
ಮೊಳೆಯುತ್ತಿವೆ ಬಂಧುತ್ವದ ಸಮಾಧಿ ಮೇಲೆ
ವಂಶವೃಕ್ಷದ ಕುಡಿಗಳು

No comments:

Post a Comment