Thursday 8 September 2016

ಪೈಲ್ವಾನ



ಕಂಸ, ಜರಾಸಂಧ, ಚಾಣೂರ...
ಎಲ್ಲರೂ ಮಲ್ಲರೇ
ಕೃಷ್ಣನೆಂಬ ಕಾಲನ ಮುಂದೆ
ತೊಡೆ ತಟ್ಟಿದವರೇ

ಸಾವಿರ ಸಾವಿರ ಸಾಮು ತೆಗೆದು
ಉಟಬೈಸು, ಲೆಕ್ಕವಿಲ್ಲದಷ್ಟು ದಂಡ ಹೊಡೆದು
ವಿಧಿಯ ಕುತ್ತಿಗೆ ಹಿಡಿದು
ಮಣಿಸಹೊರಟವರೇ

ಅಂತಿಂಥವನಲ್ಲ ಈ ಪೈಲ್ವಾನ
ತೊಡೆತಟ್ಟಿದ ಜಟ್ಟಿಗಳೆಲ್ಲ
ಇವನ ಕಾಲ ಸಮಾನ

ಈತನ ಪಟ್ಟುಗಳ ಪ್ರತಾಪಕ್ಕೆ
ಮಣ್ಣು ಮುಕ್ಕಿದವರೆಷ್ಟೋ?!

ಎದೆ ತಟ್ಟಿದವರು, ಮಟ್ಟಿಯ ಮುಟ್ಟಿ
ನಿಂತವರು; ಸೋಲರಿಯದ ಸರದಾರರು
ಕಾಲನೆಂಬ ಜಗಜಟ್ಟಿಯ ಎದುರು
ಮಂಡಿಯೂರಿದವರೇ!

ಅಖಾಡದಲ್ಲಿ ಬರಸೆಳೆದು ಬಿಗಿದಪ್ಪುವ
ಪಾಶದ ಪಟ್ಟಿಗೆ, ಪೆಟ್ಟಿಗೆ ಮಣಿದ
ಮಣ್ಣಾದ ಪೈಲ್ವಾನರ ಲೆಕ್ಕ ಇಟ್ಟವರಾರು?


No comments:

Post a Comment