Monday 5 September 2016

ಅರಳಿಮರ ಮತ್ತು ಸರ್ಪ ಸಂಬಂಧ



`ಮಗು ಬೇಕು' ಎಂಬ ಹಂಬಲಕ್ಕೆ ಮೂಲಭೂತ ಕಾರಣಗಳೇನು?
ಆಸ್ತಿ ರಕ್ಷಣೆಗಾಗಿಯೋ..? ವಂಶೋದ್ಧಾರಕ್ಕಾಗಿಯೋ ಅಥವಾ ಮಾನವ ಕುಲವನ್ನು ಮುಂದುವರಿಸುವ ಹಂಬಲವೋ? ಮನುಷ್ಯನಿಗೆ ರಕ್ತಗತವಾಗಿರುವ ತಲೆತಲಾಂತರದ ಸ್ವಭಾವವೋ?

ಮಕ್ಕಳಿಗಾಗಿ ಮರ ಸುತ್ತೋದಾ? ಅರಳಿ ಮರದ ಕೆಳಗೆ ಪ್ರತಿಷ್ಠಾಪಿಸಿರುವ ಮಿಥುನ ನಾಗರಗಳಿಗೆ ತನಿ ಎರೆದು ಪೂಜಿಸೋದಾ? ನೀನಿನ್ನು ಯಾವ ಕಾಲದಲ್ಲಿದ್ದೀಯಾ! ತಂತ್ರಜ್ಞಾನ ಬಲದಿಂದ ಎಲ್ಲ ಗ್ರಹಗಳನ್ನು ಸುತ್ತಿ ಬರುತ್ತಿರುವ ಕಾಲ ಇದು. ಪ್ರಣಾಳ ಶಿಶು ಹುಟ್ಟಿ, ಆ ಪ್ರಣಾಳ ಶಿಶುವಿಗೂ ಮಕ್ಕಳಾಗಿ ಎಷ್ಟೋ ವರ್ಷಗಳೇ ಕಳೆದುಹೋಗಿವೆ. ಬೇರೆಯವರ ವೀರ್ಯಾಣುಗಳನ್ನು ಬಸಿರಲ್ಲಿಟ್ಟು, ಒಂಭತ್ತು ತಿಂಗಳು ಹೊತ್ತರೂ ತನ್ನದಲ್ಲದ ಮಗುವಿಗೆ ಜನ್ಮ ನೀಡುವ ಬಾಡಿಗೆ ತಾಯಿಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುವ ಕಾಲ.

``ನಾಗ'' ಹೀಗಂದರೇನು?
ಉಸಿರು!
ಪ್ರಾಣಶಕ್ತಿ, ಜೀವಚೈತನ್ಯ ಇವೆರಡಕ್ಕೂ ಇರೋ ಸಂಬಂಧ ಏನು? ಅನ್ನೋದು ಗೊತ್ತಾದರೆ, ನಾನೇಕೆ ಅರಳಿ ಮರ ಸುತ್ತುತ್ತೇನೆ ಎಂಬುದು ನಿನಗೆ ತಿಳಿಯುತ್ತದೆ.

ಅಂದರೆ?!
ನನ್ನ ಮಾತಿನ ಮರ್ಮ, ಅಂತರಾರ್ಥ ನಿನಗೆ ತಿಳಿಯಬೇಕಾದರೆ ನಾಗರ, ಸರ್ಪದ ಗುಣ, ಸ್ವಭಾವಗಳ ಅರಿವು ನಿನಗಾಗಬೇಕು. ದೇಹದೊಳಗೆ ಉಸಿರಿನ ಮೂಲ ಎಲ್ಲಿದೆ ಎಂಬುದು ಗೊತ್ತಿರಬೇಕು. ಅದರ ಚಲನೆಯ ಮಾರ್ಗ, ಸ್ವಭಾವ ಅರ್ಥವಾಗಬೇಕು.
ನಿನಗೆ ಗೊತ್ತಾ?

ನೆಲದ ಮೇಲಿನ ನಾಗರ ಗತಿ, ಶರೀರದೊಳಗೆ ಉಸಿರಿನ ಚಲನೆ ಒಂದೇ ತೆರನಾದುದು. ಒಂದೇ ರೀತಿಯದ್ದು! ಸಮುದ್ರದಲೆಗಳ ಏರಿಳಿತ, ನಮ್ಮೊಳಗಿನ ಗಾಳಿಯ ಉಬ್ಬರಳಿತ ಎರಡೂ ಒಂದೇ! ಹಾಗೆಯೇ ನಾಗರ ನಡೆಯೂ ನೇರವಲ್ಲ, ಉಸಿರಿನದ್ದೂ ಕೂಡಾ! ಹರಿವ ನಾಗರ, ಉಸಿರು ಹರಿಯುವ ಶರೀರ ಎರಡರಲ್ಲೂ ಏಕತೆ ಇದೆ.
ನಾಗರ ನಿಯಂತ್ರಣ ಅಷ್ಟು ಸುಲಭವಿಲ್ಲ. ಉಸಿರು ಪ್ರಾಣದ ನಿಗ್ರಹವೂ ಅಷ್ಟೇ ಕಷ್ಟಸಾಧ್ಯ! ಕೆರಳಿದ ಸರ್ಪ ತುಂಬಾ ಅಪಾಯಕಾರಿ- ವಿಷಯಕಾರಿಯೂ ಕೂಡಾ

ಉಸಿರು- ಬದುಕಿನ ಚೈತನ್ಯ ಶಕ್ತಿ, ಪಂಚೇದ್ರಿಯಗಳಿಗೆ ಪ್ರೇರಕ-ಚಾಲಕ ಶಕ್ತಿ. ಕೆರಳಿದರೆ, ಮಾರಣಾಂತಿಕ, ಮಾರಕ. ಹೌದು, ಉರಿದರೆ ದೀಪ, ಕೆರಳಿದರೆ ಪ್ರಕೋಪ! ಅರಳಿದರೆ ನಂದನವನ, ಕೆರಳಿದರೆ ಕಾಳ್ಗಿಚ್ಚಿಗೆ ಬೆಂದ ಕಾನನ. ನಿಂತಲ್ಲಿ ನಿಲ್ಲದೆ ಹರಿವ ಮನಸ್ಸನ್ನು ನಿಗ್ರಹಿಸುವುದು; ಉಸಿರನ್ನು ನಿಯಂತ್ತಿಸುವುದು ಕಾಳಿಂಗನನ್ನು ಪಳಗಿಸಿದಷ್ಟೇ ಸಾಹಸ ಕಾರ್ಯ.
ಪ್ರಾಣ ತೆಗೆವ ಕಾರ್ಕೋಟಕ ವಿಷವೇ ಸದ್ಬಳಕೆಯಾದರೆ ಜೀವರಕ್ಷಕ ಔಷಧ. ಉಸಿರು ಮತ್ತು ನಾಗ; ಇವು ದ್ವಿಗುಣಗಳ ಸಂಗಮ. ಈ ದ್ವಿಮುಖಗಳ ಸಂಕೇತವೇ ನಾಗರ ಸೀಳಿದ, ಎರಡು ಹೋಳಾದ ನಾಲಿಗೆ!

ನಾಗ ಅಥವಾ ಸರ್ಪವೆನ್ನುವುದು ದೇಹದೊಳಗಿನ ಉಸಿರಿನ ಸಂಕೇತ.

ಇಲ್ಲಿ ನೋಡು ಅರಳಿಯ ಕೆಳಗೆ ಪ್ರತಿಷ್ಠಾಪಿಸಿರುವ ``ಮಿಥುನ ಸರ್ಪ'' ಇದರ ಗುರುತೇನು ಗೊತ್ತೇ? ಈ ಮೈಥುನ ಸರ್ಪ ನಿನ್ನೊಳಗೂ ಇದೆ. ನನ್ನೊಳಗೂ ಇದೆ. ಎಲ್ಲರೊಳಗೂ ಇದೆ. ಇದು ದೇಹದೊಳಗಿರುವ ಅವ್ಯಕ್ತ, ಅನುಭವ ವೇದ್ಯ ಯೋಗ ಚಕ್ರಗಳ ಸೇತುವೆ. ದೇಹದ ಉಸಿರು, ಪ್ರಾಣಶಕ್ತಿ ಹರಿಯುವ, ಪ್ರವಹಿಸುವ ಕಾಲುವೆ!

ಕೆರಳಿದ ನಾಗರ ವಿಷ- ಪ್ರಾಣಾಘಾತುಕ! ಕೆಲವೇ ನಿಮಿಷಗಳಲ್ಲಿ ನರನಾಡಿಗಳಲ್ಲಿರುವ ಚಲನೆಯನ್ನೇ ನಿಲ್ಲಿಸಿಬಿಡುತ್ತದೆ. ಆದರೆ, ಕೆರಳಿದ, ಕೆಟ್ಟ ಉಸಿರು, ನಿಯಂತ್ರಣ ಕಳೆದುಕೊಂಡ ಉಸಿರು ಕೂಡಾ ನಾಗರ ವಿಷಕ್ಕಿಂತಲೂ ಅಪಾಯಕಾರಿ, ವಿಷಕಾರಿ.
ವಿಶೇಷವೆಂದರೆ ಸಮುದ್ರದ ಏರಿಳಿತದಲ್ಲಿ, ಹಾವಿನ ನಡೆಯಲ್ಲಿ, ಚಲನೆಯಲ್ಲಿ ಎಂದೂ ಬದಲಾವಣೆಯಾಗುವುದಿಲ್ಲ. ಆದರೆ, ದೇಹದ ಪ್ರತಿ ನರ-ನಾಡಿಗಳಲ್ಲಿ ಹರಿವ ಉಸಿರಿನ ದಿಕ್ಕು ಬದಲಾಗುತ್ತದೆ. ಹರಿವ ವೇಗದಲ್ಲೂ ವ್ಯತ್ಯಾಸವಾಗುತ್ತದೆ.

ಚೈತನ್ಯದಾಯಕ ಬದುಕಿಗೆ ಕಾರಣವಾಗುವ ಉಸಿರು ಹಾದಿ ತಪ್ಪಿದರೆ, ಕಲುಷಿತ ಮನಸ್ಸಿಗೆ ಹೇತುವಾಗುತ್ತದೆ. ದೇಹವನ್ನು ರೋಗ-ರುಜಿನಗಳ ಗೂಡನ್ನಾಗಿಸಿಬಿಡುತ್ತದೆ. ದಿಕ್ಕುತಪ್ಪಿದ ಉಸಿರಿನಿಂದ ದೇಹದ ಆರೋಗ್ಯ ಮತ್ತು ಮನಸ್ಸು  ಸಂತುಲನ ಕಳೆದುಕೊಂಡು ದಿಕ್ಕಾಪಾಲಾಗುತ್ತದೆ.

ಹಾದಿತಪ್ಪುವ, ನಾಡಿಗಳಲ್ಲಿ ದಿಕ್ಕು ತಪ್ಪಿ ಹರಿಯುವ ಪ್ರಾಣವಾಯುವನ್ನು ಶುಚಿಗೊಳಿಸಿ ಸರಿದಾರಿಗೆ ತರುವ, ಉಸಿರಿಗೆ ದಿಕ್ಸೂಚಿಯಾಗುವ ಜೀವ ಚೈತನ್ಯಶಕ್ತಿ, ಆಮ್ಲಜನಕದ ಆಗರ- ಈ ಅರಳಿ ಮರ.

(ಮುಂದುವರಿಯುವುದು..)




No comments:

Post a Comment