Monday 29 August 2016

ಮೂಲಾಧಾರ


`ಮೃಷ್ಟಾನ್ನ ಭೋಜನ ಸವಿದರೂ ರುಚಿ ಇಲ್ಲ. ಷಡ್ರಸಗಳನ್ನು ಸವಿಯಲಾಗುತ್ತಿಲ್ಲ. ಉಪ್ಪಿನ ರುಚಿ ಬಿಟ್ಟರೆ ಬೇರಾವ ರುಚಿಯೂ ನಾಲಿಗೆಗೆ ಹತ್ತುತ್ತಿಲ್ಲ...' - ನಾಲಿಗೆಯ ಅಸ್ಪಷ್ಟ ಗೊಣಗುವಿಕೆಯನ್ನು ತೆಪ್ಪಗೆ ಕೂತು ಆಲಿಸುತ್ತಿದ್ದ ಕಿವಿ- `` ನನಗೂ ಅಷ್ಟೇ ಏನೊಂದೂ ಸರಿಯಾಗಿ ಕೇಳುತ್ತಿಲ್ಲ. ವಯಸ್ಸಿನ ಪ್ರಭಾವವೋ..? ಚಪಲತೆಯ ಪ್ರತಿಫಲವೋ? ನನಗೊಂದೂ ತಿಳಿಯುತ್ತಿಲ್ಲ. ರುಚಿಕಾಣದ ಜಿಹ್ವೆಯಷ್ಟೇ ನಿಸ್ಸಾರವಾಗಿವೆ; ಸವೆದುಹೋಗಿವೆ ಶಬ್ದ ಗ್ರಹಿಸುವ ನನ್ನ ತಮಟೆಯ ಬಾಗಿಲುಗಳು..!

ರುಚಿ ಕಳೆದುಕೊಂಡ, ಏನೊಂದನ್ನೂ ಸವಿಯಲಾಗದ ನಾಲಿಗೆಯ ಹಾದಿಯಲ್ಲೇ ಹೆಜ್ಜೆ ಹಾಕುತ್ತಿದ್ದ ಕರ್ಣಗಳ ಸ್ವಗತ ಇದು.
ಈ ಎರಡೂ ಇಂದ್ರಿಯಗಳು, ಶಕ್ತಿ, ಸತ್ವ ಎರಡನ್ನೂ ಕಳೆದುಕೊಂಡಿದ್ದ ಪಂಚೇಂದ್ರಿಗಳ ಪ್ರತಿನಿಧಿಗಳಂತಿದ್ದವು.

ರುಚಿ ಕಳೆದುಕೊಂಡರೂ ನಾಲಿಗೆಯ ಮಾತಿಗೇನೂ ಬರವಿಲ್ಲ; ಕಡಿವಾಣವೂ ಇಲ್ಲ! ಕೈರುಚಿ ಸರಿ ಇಲ್ಲ ಎಂದು ಹೆಂಡತಿಯನ್ನು ಹಳಿಯುವ; ಅವಳ ಮೇಲೆ ಮನಬಂದಂತೆ ಹರಿಹಾಯುವ ಗಂಡನ ಬಾಯಲ್ಲಿ ಕೂತ ಈ ಎಲುಬಿಲ್ಲದ ನಾಲಿಗೆಗೆ, ಆಹಾರದ ರುಚಿ ಹತ್ತದಿದ್ದರೂ ಚಪಲತೆ ಮಾತ್ರ ತೀರಿಲ್ಲ!

ಹದಿನೆಂಟರ ಕಡೆಗೆ ದಾಪುಗಾಲಿಟ್ಟಿರುವ ಷೋಡಶಿಯ ಕಂಡರೆ ಈಗಲೂ ಈತನ ರಸಿಕತೆ ಎಂಬ ನಾಲಿಗೆಯ ಲಾಲಾರಸ ಸುರಿದು, ಹರಿಯುತ್ತದೆ. ಯೌವನವನ್ನೆಲ್ಲ ನೆಕ್ಕಿ, ರುಚಿನೋಡುವ ಚಪಲತೆ.

`ಕಚ್ಚೆ ಹರುಕ ನೀನು!'

ಮೊದಲು ಕಚ್ಚೆಯನ್ನು ಬಿಗಿ ಮಾಡು, ಆಗ ತಂತಾನೇ ನಿನ್ನ ನಾಲಿಗೆಯ ರುಚಿ ಹೆಚ್ಚುತ್ತದೆ. ಜಿಹ್ವಾ ಚಪಲ ಈಡೇರುತ್ತದೆ. ಅಸ್ಪಷ್ಟವಾಗಿ ಕೇಳಿಸಿಕೊಳ್ಳುವ ನಿನ್ನ ಕಿವಿಗಳೂ ನೆಟ್ಟಗಾಗುತ್ತವೆ!

ಹೆಂಡತಿಯ ಮೂದಲಿಕೆಗೆ ಹೆಡೆಬಿಚ್ಚಿದ ನಾಗರನಂತಾಗಿದ್ದ ಗಂಡ..

`` ಏನೆಂದೆ, ನಾನು ಕಚ್ಚೆ ಹರುಕನೇ?'' ಇರಬಹುದು ! ಆದರೆ, ರುಚಿ ಕಳಕೊಂಡ ನಾಲಿಗೆಗೂ; ಕೆಪ್ಪಾದ ಕಿವಿಗೂ; ನನ್ನ ಕಚ್ಚೆಹರುಕತನಕ್ಕೂ ಏನು ಸಂಬಂಧ?

``ಮೂಲಾಧಾರ!''

ಓಲೆಗರಿಗಳ ಪುಟಗಳನ್ನ ತಿರುಗಿಸುತ್ತಾ ಪತ್ನಿ ಮೆಲ್ಲಗೆ ನುಡಿದಳು-`` ಇದು ನಿಮ್ಮ ಉಸಿರಿನ ಮೂಲ; ಬದುಕಿನ ಆಧಾರ! ವೃಕ್ಷಕ್ಕೆ ಬೇರಿದ್ದಂತೆ, ದೇಹಕ್ಕೆ ಇದು ಮೂಲಾಧಾರ!

ಮನುಜನಿಂದ ಹಿಡಿದು ಸೃಷ್ಟಿಯ ಚರಾಚರ ಪ್ರಾಣಿ-ಪಕ್ಷಿಗಳಿಗೆ ಈ ವಸುಂಧರೆ ಆಶ್ರಯದಾತೆ, ಭುವಿಯಿಲ್ಲದ ಬದುಕಿಲ್ಲ. ಸಕಲ ಜೀವಕೋಟಿಗೆ ಪೃಥ್ವೀ ಆಧಾರ. ಹಾಗೆಯೇ `ಮೂಲ'ವಿಲ್ಲದ ಜೀವವಿಲ್ಲ, ದೇಹವಿಲ್ಲ!

ಹೆಂಡತಿಯ ಮಾತಿನ ಓಘಕ್ಕೆ ಒಂದು ಕ್ಷಣ ತಡೆಯೊಡ್ಡಿದ ಗಂಡ ಕೇಳಿದ-`` ಏನದು ಮೂಲಾಧಾರ?''

ಇದೊಂದು ಶಕ್ತಿಕೇಂದ್ರ. ಮನುಷ್ಯ ತನ್ನ ಅಂತರಂಗದಲ್ಲಿ ಅತಿಯಾಗಿ ಪ್ರೀತಿಸುವ, ಬಹಿರಂಗದಲ್ಲಿ ಮೂಗುಮುರಿಯುವ; ಅಸಹ್ಯಪಟ್ಟುಕೊಳ್ಳುವ ಜಾಗ ಅದು. ಗುದದ್ವಾರ ಮತ್ತು ಜನನೇಂದ್ರಿಯದ ನಡುವಿರುವ ಸ್ಥಳ. ಹೌದು ! ಇಲ್ಲೇ ಇರುವುದು ಮೂಲಾಧಾರ. ಇದು ಮಾನವ ಜನಾಂಗದ ಜನ್ಮಸ್ಥಳ. ಮನುಕುಲ ಉಗಮಸ್ಥಾನ. ಪೂರ್ವಿಕರಿಂದ ಹಿಡಿದು ಇಲ್ಲಿಯವರೆಗೆ ಮನುಷ್ಯ ಕುಲದ ವಂಶವೃಕ್ಷ ಬೇರುಗಳು ಟಿಸಿಲೊಡೆದು ಚಿಗುರಿ; ವಟವೃಕ್ಷವಾಗಿ ಬೆಳೆದು ವಿಸ್ತಾರಗೊಂಡಿದ್ದು ಇಲ್ಲಿಂದಲೇ! ಪ್ರತಿ ಜೀವಿಯ ಕುಲದ ಉನ್ನತಿ, ಅವನತಿಗೆ ಕಾರಣವೂ ಇದೇ!

ಇನ್ನು ಈ ಮೂಲಕ್ಕೂ- ಬಾಯಿಯ ನಾಲಿಗೆಗೂ; ಕೇಳದ ಕಿವಿಗೂ ಎತ್ತಣ ಸಂಬಂಧ ಎಂದಿರಲ್ಲಾ?

ನಾಲಿಗೆಯ, ಕಿವಿಗಳ ಬೇರುಗಳಿರುವುದೇ ಈ ಮೂಲದಲ್ಲಿ. ನಾಲಿಗೆಯಲ್ಲಿ ಷಡ್ರಸರಗಳು ಸ್ರವಿಸುವುದು; ಕಿವಿಗೆ ಧ್ವನಿತರಂಗಳನ್ನು ಗ್ರಹಿಸಲು ಬೇಕಾದ ಶಕ್ತಿಸಂಚಯ ಆಗೋದು ಇಲ್ಲಿಂದಲೇ! ಬೇರಿಲ್ಲದ ಮರವನ್ನು, ರೆಕ್ಕೆಗಳಿಲ್ಲದ ಹಕ್ಕಿಗಳನ್ನು ಕಲ್ಪಿಸಿಕೊಳ್ಳಲಾದೀತೇ? ಬೇರಿಲ್ಲದ ಮರ ನಡುಮುರಿದು ಉರುಳುವುದು ನಿಶ್ಚಿತ. ರೆಕ್ಕೆಗಳನ್ನು ಕಳೆದುಕೊಂಡ ಪಕ್ಷಿ ಗಗನದತ್ತ ಮುಖಮಾಡಲು ಸಾಧ್ಯವೇ?

                                                                                                     (ಮುಂದುವರಿಯುವುದು..)

No comments:

Post a Comment