Friday 1 July 2016

ಸ್ವಚ್ಚಂದದ ಕನಸು

ನಿನ್ನೊಳಗೆ ನೀನೇ
ಅವಿತು ಕುಳಿತಿರುವೆ ಏಕೆ?
ಸಂಕುಚಿತ, ಸಂಕೋಚದ ಗೋಡೆಯ ಹಿಂದೆ..
ಸಾವಿಗೂ ಮುನ್ನ,
ನಿನ್ನ ಸಮಾಧಿಯ ನೀನೇ ತೋಡಿಕೊಂಡು?! 

ನೀನೇ ಹೆಣೆದ ರೇಷಿಮೆಯ ಬಂಧಿಖಾನೆಯ
ಕೀಲಿ ತೆರೆದು,
ಜೀವಸಮಾಧಿಯಾಗುವುದನ್ನು
ಸಾಕು ನಿಲ್ಲಿಸು..!

ನೀನಿರುವ ನಗರದ ಎತ್ತರದ
ಗೋಪುರವ ಏರಿ ಹೋಗು..
ಸಿಟಿಯ ಜಂಜಡವ ತೊರೆದು
ಭೂ ಮಡಿಲ ಮೆಟ್ಟಿನಿಂತು
ಮುಗಿಲ ಚುಂಬಿಸಹೊರಟ
ಪರ್ವತದ ತುತ್ತ ತುದಿಗೇರಿ ನೋಡು..!
ಸರ್ವ ದಿಕ್ಕಿಗೂ ವ್ಯಾಪಿಸಿ ನಿಂತ
ಕೊನೆಯಿಲ್ಲದ, ವಿಸ್ತಾರ, ವಿಶಾಲ
ವಿಶ್ವದಲಿ ತೇಲಿಹೋಗು..!

ಜೀವದುಸಿರು ಸಿಗಬಹುದು
ಬಣ್ಣಬಣ್ಣದ ಪಾತರಗಿತ್ತಿಯರು ಕಾಣಬಹುದು
ಮೇಘ ಮಾನಿನಿಯರ ಜತೆ ತೇಲಿ ಹೋಗಬಹುದು
ಮುಗಿಲ ಮಳೆ ಮುತ್ತುಗಳಲ್ಲಿ ಮಿಂದು
ಮೈಮರೆಯಬಹುದು..
ಗರಿಬಿಚ್ಚಿದ, ಸ್ವಚ್ಛಂದ ಖಗಗಳಿಂದ
ಸ್ವಾತಂತ್ರ್ಯದ ಪಾಠ ಕಲಿಯಬಹುದು..

ನಿನ್ನೊಳಗೆ ನೀನೇ
ಅವಿತು ಕುಳಿತಿರುವೆ ಏಕೆ?
ಸಂಕುಚಿತ, ಸಂಕೋಚದ ಸಂಕೋಲೆಯೊಳಗೆ..
ಸಾವಿಗೂ ಮುನ್ನ,
ನಿನ್ನ ಸಮಾಧಿ ನೀನೇ ತೋಡಿಕೊಂಡು..!

No comments:

Post a Comment