Tuesday, 13 November 2012

scribbling ಮಕ್ಕಳ ವ್ಯಕ್ತಿತ್ವದ ಕನ್ನಡಿ, ಮುನ್ನುಡಿ ಅಳಿಸಬೇಡಿ




ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳುವ ಹಂತದಲ್ಲಿರುವ ಮಗು

ಮಕ್ಕಳ ವ್ಯಕ್ತಿತ್ವ ರೂಪಗೊಳ್ಳಲು ಅವರ ಬಾಲ್ಯ ಎಷ್ಟು ಮಹತ್ವದ್ದು, ದೃಶ್ಯ ಪ್ರಜ್ಞೆಯ ಮೂಲಕ ಅವರ ವ್ಯಕ್ತಿತ್ವ ಹೇಗೆ ಅರಳುತ್ತದೆ? ಇತ್ಯಾದಿ ವಿಷಯಗಳ ಕುರಿತು ಡಾ. ಎಂ.ಎಸ್ ಮೂರ್ತಿ ಇಲ್ಲಿ ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಾರೆ. ಮಕ್ಕಳ ಬಣ್ಣಗಳ ಗೆರೆ, ಭಾಷೆಯನ್ನು ಅರ್ಥೈಸಿಕೊಳ್ಳಲು ಸಾಕಷ್ಟು ಅಧ್ಯಯನ ನಡೆಸಿರುವ ಅವರು, ಈ ನಿಟ್ಟಿನಲ್ಲಿ ಹಲವು ಪ್ರಯೋಗಗಳನ್ನೂ ನಡೆಸಿದ್ದಾರೆ, ಈಗಲೂ ನಡೆಸುತ್ತಿದ್ದಾರೆ. 


ಮಕ್ಕಳು ರೂಪಿಸುವ ಚಿತ್ರ, ಗೆರೆಗಳಿಂದ ಅವರ ಸ್ವಭಾವ, ವ್ಯಕ್ತಿತ್ವವನ್ನು ಗುರುತಿಸಲು, ರೂಪಿಸಲು ಸಾಧ್ಯವೇ?
ಖಂಡಿತ ಸಾಧ್ಯವಿದೆ. ಯಾವುದೇ ಮಗು ನೆಲದಲ್ಲಿ ತೆವಳಿ, ಅಂಬೆಗಾಲಿಕ್ಕಿ ಗೋಡೆ ಹಿಡಿದು ನಡೆಯಲು ಶುರುಮಾಡುತ್ತದೆ. ಇದು ಪ್ರತಿ ಮಗುವಿನ ಬೆಳವಣಿಗೆಯ ಸಹಜ ಹಂತ. ಈ ಅವಧಿಯಲ್ಲೇ ಗೋಡೆ ಮೇಲೆ ಅಡ್ಡ, ಉದ್ದ, ಸೊನ್ನೆ... ಹೀಗೆ ಚಿತ್ತಾರ ಬಿಡಿಸಲು ಆರಂಭಿಸುತ್ತದೆ.
ಇದನ್ನು ನಾವು ಸ್ಕ್ರಿಬ್ಲಿಂಗ್ (ಠ್ಚ್ಟಜಿಚಿಚ್ಝಿಜ್ಞಿಜ)ಎನ್ನುತ್ತೇವೆ. ಈ ಗೀಚುವಿಕೆಯನ್ನು ಖ್ಯಾತ ಕಲಾವಿದ, ಸಾಹಿತಿ ಡಾ. ಎಂ.ಎಸ್ ಮೂರ್ತಿ ಮಗುವಿನ ಇಡೀ ವ್ಯಕ್ತಿತ್ವದ ಜಾತಕ ಎನ್ನುತ್ತಾರೆ. ಹುಟ್ಟಿದ ಇಪ್ಪತ್ತು ತಿಂಗಳ ಅವಧಿಯಲ್ಲಿ ಮಗು ತನ್ನ ಮಿದುಳೆಂಬ ಹಾರ್ಡ್ ಡಿಸ್ಕ್‌ನಲ್ಲಿ ದಾಖಲಾದ ಅಸ್ಪಷ್ಟ ದೃಶ್ಯ, ನೆನಪು ಹಾಗೂ ತನ್ನ ಪರಿಸರದಲ್ಲಿ ತನ್ನ ಅನುಭವಕ್ಕೆ ಬರುವ ಎಲ್ಲವನ್ನೂ ತನ್ನದೇ ದೃಶ್ಯ ಭಾಷೆಯಲ್ಲಿ ಚಿತ್ರಿಸಲು ಶುರು ಮಾಡುತ್ತದೆ. ತನಗೆ ನಿಲ್ಲಲು ಹಾಗೂ ಸುಲಭವಾಗಿ ನಿಲುಕುವ ಮನೆಯ ಗೋಡೆಯಲ್ಲಿ ಮಗುವಿನ ಅಮೂರ್ತ ಕಲ್ಪನೆಗಳು, ಅಡ್ಡ, ಉದ್ದನೆ ಗೆರೆಗಳಾಗಿ, ಸೊನ್ನೆಯ ರೂಪದಲ್ಲಿ ಮೂಡಲಾರಂಭಿಸುತ್ತವೆ.
ಮಗು ಗೀಚುವುದರಿಂದ ಗೋಡೆಯ ಸೌಂದರ್ಯ ಹಾಳಾಗುತ್ತದೆ. ಮನೆಯೆಲ್ಲ ಗಲೀಜಾಗುವುದೆಂಬ ಕಾರಣಕ್ಕೆ ಬಹುತೇಕ ತಂದೆ-ತಾಯಂದಿರು ಮಗುವಿನ ಗೋಡೆ ಬರಹಕ್ಕೆ ಅಡ್ಡಿಪಡಿಸುತ್ತಾರೆ. ಗೀಚಿದ ಗೋಡೆಯನ್ನು ನೀರಿನಿಂದ ಸ್ವಚ್ಛಗೊಳಿಸಿಬಿಡುತ್ತಾರೆ. ನಿಜ ಹೇಳಬೇಕೆಂದರೆ ಗೀಚುವಿಕೆ ಮೂಲಕ ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳುವ ಹಂತದಲ್ಲಿರುವ ಮಗುವಿಗೆ ತಂದೆ-ತಾಯಿಗಳು ನೀಡುವ ಮೊದಲ ಶಾಕ್ ಇದು.
ತಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಪೋಷಕರು ನೀಡುವ ಈ ಮೊದಲ ಪೆಟ್ಟು ಮಗುವಿನ ವ್ಯಕ್ತಿತ್ವ ಅರಳುವಿಕೆಗೆ ಅಡ್ಡಿಯಾಗುತ್ತದೆ. ಇದರಿಂದ ಮಗುವಿನ ಮನಸ್ಸಿನಾಳದಲ್ಲಿ ಅಪಮಾನ, ಹತಾಶೆ ಮೊಳಕೆಯೊಡೆಯುತ್ತದೆ. ಅದರ ಭಾವನೆಗಳು, ಕಲ್ಪನೆಗಳು ಅರಳು ಹಂತದಲ್ಲೇ ಕಮರಲಾರಂಭಿಸುತ್ತವೆ. ಆದರೂ ಮಗುವಿನ ಮನಸ್ಸಿನಾಳದಲ್ಲಿ ಅಭಿವ್ಯಕ್ತಿಯ ತುಡಿತ ಇದ್ದೇ ಇರುತ್ತದೆ. ಹಾಗಾಗಿ ಸ್ವಚ್ಛಗೊಳಿಸಿದ ಗೋಡೆಯ ಮೇಲೆ ಅದು ಮತ್ತೆ ಬರೆಯಲಾರಂಭಿಸುತ್ತದೆ.
ನಿಜವಾಗಿಯೂ ನಿಮ್ಮ ಮಗುವಿನ ವ್ಯಕ್ತಿತ್ವ ಸಹಜವಾಗಿ ಅರಳಬೇಕೆಂದಿದ್ದರೆ ಅವನ/ಅವಳ ಗೀಚುವಿಕೆಗೆ ಅಡ್ಡಿಪಡಿಸಬೇಡಿ. ಗೋಡೆಯ ಮೇಲಿನ ಗೀಚುವಿಗೆಯನ್ನು ಅಳಿಸುವ ಮೂಲಕ ಆಗತಾನೆ ಅರಳಲು ಯತ್ನಿಸುತ್ತಿರುವ ಮಗುವೆಂಬ ಮೊಗ್ಗನ್ನು ಚಿವುಟುತ್ತಿದ್ದೀರಿ ಎಂಬುದನ್ನೂ ಮರೆಯಬೇಡಿ.
ಮನೆಯಲ್ಲಿ ನಡೆಯುವ ಮದುವೆ, ಹುಟ್ಟುಹಬ್ಬ ಇತ್ಯಾದಿ ಸಮಾರಂಭಗಳ ಸಂಭ್ರಮವನ್ನು ಫೋಟೋ ಆಲ್ಬಂಗಳಲ್ಲಿ ಸಂಗ್ರಹಿಸುತ್ತೀರಿ. ಬೇಕೆಂದಾಗ ಆ ಫೋಟೋಗಳನ್ನು ನೋಡಿ ಹಳೆಯ ಸವಿ ನೆನಪುಗಳನ್ನು ಖುಷಿಯಿಂದ ಮೆಲುಕು ಹಾಕುತ್ತೀರಿ. ಆದರೆ ಮಕ್ಕಳ ವ್ಯಕ್ತಿತ್ವದ ಜಾತಕದಂತಿರುವ ಅವರ ಗೋಡೆ ಬರಹವನ್ನು ಆರಂಭದಲ್ಲೇ ಅಳಿಸಿಬಿಡುತ್ತೀರಿ. ಜತೆಗೆ ಅವರ ವ್ಯಕ್ತಿತ್ವವನ್ನೂ...
ಮಗು ಹುಟ್ಟಿದ ತಕ್ಷಣ ಅದರ ರಾಶಿ ಕುಂಡಲಿಗಳನ್ನು ಬರೆಸುತ್ತೇವೆ. ಆದರೆ ಈ ರಾಶಿ ಕುಂಡಲಿಗಳನ್ನು ಒಳಗೊಂಡ ಜಾತಕದಷ್ಟೇ ಮುಖ್ಯ ಮಕ್ಕಳ ಈ ಗೋಡೆ ಬರಹ. ದಯವಿಟ್ಟು ಅವರ ಗೋಡೆ ಬರಹವನ್ನು ಫೋಟೋ ಆಲ್ಬಂ ಮಾಡಿ. ಇದರಿಂದ ಅವರ ವ್ಯಕ್ತಿತ್ವ ರೂಪಿಸಬಹುದು. ಭವಿಷ್ಯದಲ್ಲಿ ಎದುರಾಗಬಹುದಾದ ಅವರ ಮಾನಸಿಕ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ ಎಂ.ಎಸ್ ಮೂರ್ತಿ.
ಇತ್ತೀಚಿನ ವರ್ಷಗಳಲ್ಲಿ ಚಿತ್ರಕಲೆ ವಿಷಯ ಶಾಲೆಗಳಲ್ಲಿ ಬೋಧನಾ ಪಠ್ಯವಾಗಿದೆ. ನಿಜಕ್ಕೂ ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ, ಅವರಲ್ಲಿರುವ ಪ್ರತಿಭೆಯನ್ನು ಹೊರತರುವಲ್ಲಿ ಇದು ಯಶಸ್ವಿಯಾಗಿದೆಯೇ?
ಶಿಕ್ಷಣದಲ್ಲಿ ವೈಜ್ಞಾನಿಕವಾಗಿ ಚಿತ್ರಕಲೆಯನ್ನು ಪರಿಚಯಿಸಿಲ್ಲ. ಚಿತ್ರಕಲೆ ಪಠ್ಯ ಅಳವಡಿಸಿರುವುದು ಶಿಕ್ಷಕರ ಉದ್ಯೋಗ ಸೃಷ್ಟಿಯಲ್ಲಿ ಉಪಯೋಗವಾಗಿದೆಯೇ ವಿನಃ ಮಕ್ಕಳಲ್ಲಿ ದೃಶ್ಯ ಪ್ರಜ್ಞೆಯನ್ನು ಬೆಳೆಸುವ ಹಾಗೂ ಇದರಿಂದ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಗೊಳ್ಳುವ ನಿಟ್ಟಿನಲ್ಲಿ ಪ್ರಯೋಜನವಾಗಿಲ್ಲ. ಆದರೆ ಮಕ್ಕಳಲ್ಲಿ ದೃಶ್ಯಪ್ರಜ್ಞೆ ಬೆಳೆಸಬೇಕಾದರೆ, ಶಾಲೆಗಳಲ್ಲಿ ಪಠ್ಯವಾಗಿರುವ ಚಿತ್ರಕಲೆ ಮಕ್ಕಳ ವ್ಯಕ್ತಿತ್ವ ರೂಪಿಸಬೇಕಾದರೆ ಅದನ್ನು ವೈಜ್ಞಾನಿಕವಾಗಿ ಬೋಧಿಸುವ, ಕಲಿಸುವ ತರಬೇತಿಯನ್ನು ಮೊದಲು ಶಿಕ್ಷಕರಿಗೆ ನೀಡಬೇಕು.
ನಿಮ್ಮ ‘ದೃಶ್ಯ ಪ್ರಜ್ಞೆ’ ಪ್ರಯೋಗದಿಂದ ಮಕ್ಕಳಿಗಾಗುವ ಪ್ರಯೋಜನ, ಲಾಭಗಳೇನು?
ದೃಶ್ಯ ಪ್ರಜ್ಞೆಯ ಪ್ರಯೋಗಕ್ಕೊಳಪಟ್ಟ ಮಗು ಪ್ರೌಢನಾದಾಗ ಸಮಾಜದ ಪರಿಪೂರ್ಣ ವ್ಯಕ್ತಿತ್ವದ ಪ್ರಜೆಯಾಗಿ ಯಶಸ್ವಿಯಾಗುತ್ತಾನೆ. ಧರ್ಮ, ಜಾತಿ, ವರ್ಣಗಳನ್ನು ಮೀರಿ ಮನುಷ್ಯತ್ವಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾನೆ. ಆಧುನಿಕ ಸಮಾಜದ ಸ್ಪರ್ಧಾತ್ಮಕ ಬದುಕಿಗೆ ಆತ ಬಲಿಯಾಗುವುದಿಲ್ಲ.ನಿರುಮ್ಮಳ ಜೀವನ ನಡೆಸಲು ಬೇಕಾಗುವಂತಹ ಸಮಚಿತ್ತ, ಮಾನಸಿಕ ಚೈತನ್ಯ, ಸಂದಿಗ್ಧ ಸ್ಥಿತಿ ಎದುರಾದಾಗ ಮುಂದಾಲೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವ ಆತ್ಮವಿಶ್ವಾಸ ಹೊಂದಿರುತ್ತಾನೆ.
ದೃಶ್ಯ ಪ್ರಜ್ಞೆಯ ಮೂಲಕ ಮಕ್ಕಳ ವ್ಯಕ್ತಿತ್ವ ನಿರ್ಮಿಸುವ ನಿಟ್ಟಿನಲ್ಲಿ ಎಂ.ಎಸ್ ಮೂರ್ತಿ ಸಾಕಷ್ಟು ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಶಿಬಿರಗಳನ್ನೂ ಆಯೋಜಿಸುತ್ತಿದ್ದಾರೆ.
 ................................................
‘ನಿಮ್ಮ ಮಕ್ಕಳು ಗೋಡೆಗಳ ಮೇಲೆ ಚಿತ್ರ ಬಿಡಿಸಲು, ಗೀಚಲು ಇಚ್ಚಿಸಿದರೆ ದಯವಿಟ್ಟು ಅವರನ್ನು ಅಡ್ಡಿಪಡಿಸಬೇಡಿ. ಮನೆಯ ಗೋಡೆಯ ಅಂದಕ್ಕಿಂತ ಮಕ್ಕಳ ವ್ಯಕ್ತಿತ್ವ ಅರಳುವುದು ಬಹಳ ಮೌಲ್ಯಯುತವಾದುದು. ನನ್ನ ಬಾಲ್ಯದ ದಿನಗಳನ್ನು ಕಳೆದ ಆ ಮನೆಗೆ ಹೋಗುವುದೆಂದರೆ ನಿಧಿಯೇ ಸಿಕ್ಕಂತೆ ಭಾಸವಾಗುತ್ತಿತ್ತು. ಈಗಲೂ ಅಲ್ಲಿಗೆ ಹೋದಾಗ ಮಂಚದ ಮೇಲೆ ಅಂಗಾತ ಮಲಗಿ ಆ ಬಾಲ್ಯದ ದಿನಗಳನ್ನು ನೆನಪಿಸುವ ಆ ಗೋಡೆಗಳನ್ನು ನೋಡುತ್ತ, ಗೋಡೆಗಳ ಮೇಲೆ ಬರೆಯಲು ಅವಕಾಶ ನೀಡಿದ ತಂದೆ-ತಾಯಿಗಳನ್ನು ನೆನೆಯುತ್ತ ನಾನೆಷ್ಟು ಸುದೈವಿ ಎಂದು ಹೇಳಿಕೊಳ್ಳುತ್ತೇನೆ. ಹಾಯಾಗಿ ಹಾಗೇ ನಿದ್ರಿಸುತ್ತೇನೆ....’
ಅಡೋಬ್, ಗೂಗಲ್, ವಾಲ್ಟ್ ಡಿಸ್ನಿಯಂಥ ವಿಶ್ವದ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡಿದ ಅಮೆರಿಕದ ಕಂಪ್ಯೂಟರ್ ವಿಜ್ಞಾನಿ randi ಪಾಶ್ ಅವರ ಬಾಲ್ಯದ ಅನುಭವಗಳನ್ನು ಹಂಚಿಕೊಂಡಿರುವ ರೀತಿ ಇದು. ತನ್ನೆಲ್ಲ ಕ್ರಿಯಾಶೀಲತೆ, ವ್ಯಕ್ತಿತ್ವ ಅರಳುವಿಕೆಗೆ ಗೋಡೆ ಬರಹವೇ ಜೀವಾಳ ಎಂಬುದು ಅವರ ಅಭಿಮತ.



No comments:

Post a Comment