Sunday, 28 April 2013

ನಡೆ-ನುಡಿಯ ಶವಯಾತ್ರೆ





ಉದ್ಯಾನನಗರಿ ಇಪ್ಪನ್ನಾಲ್ಕು ಗಂಟೆಯೂ
ಜೀವಂತ; ಚಲನಶೀಲ

ಮಧ್ಯರಾತ್ರಿವರೆಗೂ ಕುಡಿಸುವ ಬಾರುಗಳು
ಗರಿಬಿಚ್ಚಿ ನರ್ತಿಸಿವೆ, ಮಾನಬಿಟ್ಟು ವರ್ತಿಸುವ
ಕುಣಿಯುವ ಕ್ಲಬ್ಬುಗಳು, ಪಬ್ಬುಗಳು

ಪಕ್ಕದ ಮನೆಯಲ್ಲಿ ನಡೆದಿದೆ ಹತ್ಯೆ ಬರ್ಬರ
ನೆತ್ತರು ಧಾರಾಕಾರ;
ಕಂಡೂ ಕಾಣದ ನಿಜ ನಾಗರಿಕರು!
ನೀಡುವುದಿಲ್ಲ ಯಾರೂ ಸಾಕ್ಷ್ಯಾಧಾರ
ನಡೆದದ್ದು ಜೀವಗಳ ಕೊಲೆಯೋ, ಭಾವಗಳ ಹತ್ಯೆಯೋ
ತಿಳಿಯದು ಅರಿವಿನ ಮನಕ್ಕೆ

ಜೀವಂತ ನಗರಿಯಲ್ಲಿ  ನಡೆ-ನುಡಿಯ ಶವಯಾತ್ರೆ
ಸಮಾಧಿಯ ಶವಗಳೂ ಎದ್ದೆದ್ದು ಕುಣಿದಿವೆ
ನಾಗಾಲೋಟದ ನಿಸ್ತೇಜ ಮುಖಗಳಲ್ಲಿ...

No comments:

Post a Comment