Saturday 4 January 2014

ಏನಿದು ಎರಡಕ್ಷರದ ಕಾಮ?!


ಬಾಯಲ್ಲಿ ರಾಮನಾಮ; ಮನದಿ ಬರೀ ಕಾಮ
ಕಾವಿಗಳಿಗೇ ಮಾರ್ಜಾಲ ವೇಷ ತೊಡಿಸಿ ಬಿಟ್ಟಿರುವೆಯಲ್ಲಾ?!
ಮನಸಿಜ! ಮಹಾಬ್ರಾಹ್ಮಣ ವಿಶ್ವಾಮಿತ್ರಗೆ ಹೆಣೆದೆ ಮಾಯಾಜಾಲ
ಮೋಹಿನಿಯ ಮೋಹದಾಲಾಹಲದ ಮತ್ತು
ದಾನವಗೆ ಸಿಗಲಿಲ್ಲ ಅಮೃತದ ತುತ್ತು

ಕಾಮಕ್ಕೆ ಕಣ್ಣಿಲ್ಲ; ಶೀಲಕ್ಕೆ ಬೆಲೆಯಿಲ್ಲ, ಪ್ರಾಣಕಿಂತ
ಮಾನ ಮುಖ್ಯ ಎಂದವರೆಲ್ಲ ಮಣ್ಣಾದರಲ್ಲ!
ವಿಕೃತಿಯ ಆವೇಗದಲಿ ಕುರುಡಾಯ್ತು ಕಾಮ
ಆಸೆಯ ಅಂಬಾರಿ ಹೊತ್ತ ಮದಕರಿ ನಡೆದದ್ದೇ ದಾರಿ
ಶೀಲ-ಅಶ್ಲೀಲತೆ ಹಂಗಿಲ್ಲದ ಮನಕೆ ಶವವೂ ಸುಂದರಿ!

ಸರ್ವ ಸಮ್ಮತ ಕಾಮ ನಾನೆಂದಲ್ಲ, ಕೃಷ್ಣ... 
ಕೌರವಗೆ ಸೀರೆ ಎಳೆಯಲು ಬಿಟ್ಟು, ದ್ರೌಪದಿಯ ಮಾನ ಕಾಪಿಟ್ಟು
ಲೋಕದ ದೃಷ್ಟಿಗೆ ಗೊಲ್ಲ; ಸ್ತ್ರೀಲೋಲ ಆದನಲ್ಲ!
ಗೋಪಾಲನೋ ದಶಾವತಾರಿ;  ಮದನ ಸಹಸ್ರಾವತಾರಿ

ಮನದ ಮೂಲೆಯ ಬೀಜ ಮೊಳೆದು, ಬೆಳೆಯುತ್ತಲೇ ಇದೆ
ಸಹಸ್ರ ಸಹಸ್ರ ಶಾಖೆಗಳ ವಿಶ್ವರೂಪ
ಕುಸುಮದ ಮಕರಂದ, ಸೃಷ್ಟಿಯ ಆನಂದ
ತಲೆತಲಾಂತರದ, ತಾತ-ಮುತ್ತಾತನ ಆಸ್ತಿ
ಗೋರಿ ಗೋರಿಯಲಿ, ಅಸ್ಥಿ ಅಸ್ಥಿಯಲಿ ಕೆತ್ತಿದ ಇತಿಹಾಸದ ಭಿತ್ತಿ
ಯೋನಿ ಯೋನಿಗಳ ಹರಿವ ಜೀವರಸ
ನರನಾಡಿಗಳ ಚಿಮ್ಮುವ ಶೌರ್ಯರಸ
ಹೃದಯ ಕವಾಟಗಳ ಮಿಡಿವ ಭಾವರಸ
ಕಣ್ಣೊಳಗಿನ ಸೌಂದರ್ಯ; ಕಿವಿಯೊಳಗಿನ ಮಾಧುರ್ಯ
ನಾಲಗೆಯ ಲಾಲಾರಸ; ತೋಳ್ ತೆಕ್ಕೆಯ ಸರಸ
ಅರಳಿದರೆ ಪೀಯೂಷ; ಕೆರಳಿದರೆ ಲಾವಾರಸ
ಕಾಪಿಟ್ಟರೆ ರಾಮ, ಕಾವ್ ಕೊಟ್ಟರೆ ರಾವಣ
ಮೂಲದಲಿ ತಣ್ಣಗೆ ಮಲಗಿದ ನಾಗರ
ತಂತ್ರದಲಿ ಶಿವ-ಶಕ್ತಿಯ ಸಂಗಮ ಶಿಖರ
ಅವರವರ ಭಾವದಲಿ ಉತ್ತರ ಅಪಾರ
ಕೊನೆಗೂ ಉಳಿವ, ಕಾಡುವ ಪ್ರಶ್ನೆ
ಏನದು, ಏನಿದು, ಎರಡಕ್ಷರದ ಕಾಮ?!


No comments:

Post a Comment