Monday 21 July 2014

ಸಂಪಿಗೆ ಮರ ಮತ್ತು ಕಾಗೆ



ಕಾಂಕ್ರಿಂಟ್ ಕಾಡಿನ ಪುಟ್​ಪಾತ್​ ಮೇಲೊಂದು ಒಂಟಿ ಮರ
ಅದೊಂದು ರಾತ್ರಿ ಉದ್ಯಾನನಗರಿ ತಣ್ಣಗೆ ಮಲಗಿತ್ತು..
ಮುಂಗಾರು ಮಳೆ, ಜೀರುಂಡೆಗಳ ಸದ್ದಿಗೆ ಇಳೆ ತಣಿದಿತ್ತು..
ನೆನೆದು ತೊಪ್ಪೆಯಾಗಿದ್ದ ಒಂಟಿ ಕಾಗೆ ಸಂಪಿಗೆ ಮರದಲ್ಲಿ ತೂಕಡಿಸುತ್ತಿತ್ತು
ನಟ್ಟಿರುಳು, ಪಾಪ ಕೊಂಬೆಯ ನಂಬಿ ಕಾಗೆ ಕಣ್ಮುಚ್ಚಿತ್ತು..
ಥಳಕಿನ ಲೋಕದ, ಸೂರಿಲ್ಲದ ಬದುಕುಗಳ ರಾಯಭಾರಿ
ಇದೊಂದು ರಾತ್ರಿ ಸಂಪಿಗೆ ನಡುಮುರಿದು ಬೀಳದಿರಲೆಂದು ಜಪಿಸುತ್ತಿತ್ತು..


ಹೆಸರಿಗೆ ಸಂಪಿಗೆ.. ಸುವಾಸನೆಯ ಗಂಧ, ಗಾಳಿ ಇಲ್ಲ..!
ಪಾಪ, ನಿನ್ನದೇನೂ ತಪ್ಪಿಲ್ಲ ಬಿಡು ಸಂಪಿಗೆ..
ಮುಖ, ಮೂಗಿಗೆ ರಾಚುತ್ತಿದೆ ವಾಹನಗಳ ಧೂಪ, ಕಾಡಿಗೆ..
ಯಾಂತ್ರಿಕ ಶಕ್ತಿಯ ಪೆಡಂಭೂತಗಳು
ನಾಸಿಕಾಗ್ರಹದ ಗ್ರಹಿಕೆಯನ್ನೇ ಕಸಿದುಬಿಟ್ಟಿವೆ..!

ಹೂಜಿಗೆ ಕಲ್ಲು ತುಂಬಿ ನೀರು ಕುಡಿವ,
ಕಾಕ ಕಾಲ ಸರಿದು ಕೇಡುಗಾಲ ಕಾಲಿಟ್ಟಿದೆ..
ಅಂತರ್ಜಲ ಪಾತಾಳ ಸೇರಿದೆ
ಭೀಕರ ಬರಗಾಲ ತುದಿಗಾಲ ಮೇಲೆ ನಿಂತಿದೆ..
ಕಾಲಡಿಯ ಕೊಂಬೆ ಮುರಿದು
ಸಂಪಿಗೆ ಸತ್ತು ಸ್ವರ್ಗ ಸೇರೋ ಯಮಗಂಡ ಕಾಲ
ಈ ಒಂಟಿ ಕಾಗೆ
ಭವಿಷ್ಯದ ಭೀಕರತೆಯನ್ನು ಸಾಕ್ಷೀಕರಿಸುತ್ತಿದೆ..
ಕಾಂಕ್ರಿಟ್​ ಕಾಡಿನ ಒಂಟಿತನ, ನಿರ್ದಯತೆಯ ಸಂಕೇತದಂತಿದೆ..


ಕಾಗೆ, ಬಲದಿಂದ ಎಡಕ್ಕೆ ಹಾರಿದರೆ ಅಪಶಕುನ...!
ತಲೆ ಕುಕ್ಕಿದರೆ ಮಡಿಸ್ನಾನ, ದೇವರ ದರ್ಶನ..
ಶತಮಾನಗಳಿಂದ ಬಡ ತಲೆಗಳ ಕುಕ್ಕುತ್ತಲೇ ಇದೆ ಶನಿ ಸಂತಾನ..
ಮಾಡಿದರೆ ಜನತಾ ದರ್ಶನ, ವಿಮಾನ ಏರಿದರೆ ವಿದೇಶ ದರ್ಶನ
ಶಪಿಸುತ್ತಲೇ ಇದ್ದಾರೆ ಜನ, ಥೂ.., ಬೆಳ್ಳಂಬೆಳಗ್ಗೆ ಕಾಕ ದರ್ಶನ
ಇಷ್ಟಕ್ಕೂ ಸಂಪಿಗೆ ಮರದಲ್ಲಿ ಕೂತ ಒಂಟಿ ಕಾಗೆಯ ತಪ್ಪೇನು..?!

ಈಗ ಆ ಸಂಪಿಗೆ ಮರವಿಲ್ಲ, ಕಾಗೆಯ ಸದ್ದೂ ಇಲ್ಲ..!
ನಡು ಮುರಿದು ಬಿದ್ದ ಸಂಪಿಗೆಯ ಬುಡದಲ್ಲೇ
ವಾಸ್ತುಪ್ರಕಾರ ಗಗನಚುಂಬಿ ಮಹಲು ತಲೆ ಎತ್ತಿದೆ
ಮಹಲಿನಲ್ಲಿ ಮಳೆಕೊಯ್ಲು ಕಡ್ಡಾಯವಾಗಿದೆ
ತನ್ನ ಬುದ್ಧಿವಂತಿಕೆಗೆ ತಾನೇ ಹಿಗ್ಗುತ್ತಿದೆ ಶನಿಸಂತಾನ !


No comments:

Post a Comment