Monday 3 November 2014

ಬದಲಾಗದ ಶ್ವಾನ ಭಾವ..!


ಅಪ್ಪ ರಿಕ್ಷಾ ಚಾಲಕ; ಅಮ್ಮ ಮನೆ ನಿರ್ವಾಹಕಿ
ಓಡಿದ್ರೆ ತ್ರಿಚಕ್ರ ವಾಹನ ಮೂರ್ಕಾಲ
ತುಂಬುತ್ತೆ ಕುಟುಂಬದ ತುತ್ತಿನ ಚೀಲ
ನಾವು ಓದಿದ್ದು ಅಆಇಈ ಅಂತೆ-ಕಂತೆ
ದಂಪತಿಗೆ ವಂಶೋದ್ಧಾರಕನ ಭವಿಷ್ಯತ್ತಿನ ಚಿಂತೆ
ಮಗನಾದ್ರೂ ಕಲಿಯಲಿ ಎಬಿಸಿಡಿ

ಆಟೋದಲ್ಲೇ ಕುಳಿತಿದ್ದ ಮಗು 'ಆ' ಅಂತು
ಚಂದ್ರನ ತೋರುತ್ತ ಬಾಯಿಗೆ ತುತ್ತಿಟ್ಟು
ಅಮ್ಮ ಹೇಳಿದಳು 'ಆ' ಅಲ್ಲ, A
ಬಾಯ್ ಬಿಡು ಮಾಡಬೇಡ ಗಡಿಬಿಡಿ
ಅವ ಚಂದ್ರ ಅಲ್ಲ MOON
ಆಕಾಶದೆಡೆಗೆ ಕೈತೋರಿದ ಮಗುವಿಗೆ ಅಮ್ಮನ ಉತ್ತರ
ಅಂದು ಗೌರಿ ಹುಣ್ಣಿಮೆ; ರಾಜ್ಯೋತ್ಸವ ಬೇರೆ
ಅಮ್ಮನ ಮಾತುಕೇಳಿ ಶಶಿ ಮಂಕಾದ
ಚಂದ್ರವದನ ಕಂದನಿಗೆ ಅಮ್ಮನ ಕಾಳಜಿಯ ಗ್ರಹಣ
ರಾಕೆಟ್ ಯುಗದಲ್ಲಿ ಆಟೋ ಸ್ಪರ್ಧೆ ಸಾಧ್ಯವೇ?!
ಮಗನ ಭವಿತವ್ಯಕೆ ತಾಯಿಯ ಆತಂಕ ಸಹಜವೇ..!
ಚಕ್ರಗಳಿಲ್ಲದೇ ಹಾರೋ ಕಾರುಗಳ ಯುಗ ಬಂದಾಯ್ತು..
ಫೇಸ್ಬುಕ್, ವಾಟ್ಸ್ಆಪ್ಗಳ ಜಮಾನ ಶುರುವಾಗಿ ಎಷ್ಟೋ ಕಾಲವಾಯ್ತು..
ಗುಂಡಿಬಿದ್ದ ರಸ್ತೆಗಳಲ್ಲಿ ಆಟೋ ಏರಿ ಮಗ ಗುರಿ ತಲುಪೋದಾದ್ರೂ ಯಾವಾಗ..?
ಪ್ರತಿವರ್ಷ ಬಂದೇ ಬರುತ್ತೆ ರಾಜ್ಯೋತ್ಸವ
ಒಮ್ಮೆ ಮಾತ್ರ ಸಿಗೋದು ಈ ಜನ್ಮ, ಈ ಜೀವ..
ಬದಲಾಗದು 'ಸಿರಿಗನ್ನಡಂ ಗೆಲ್ಗೆ' ಆಟೋ ತಲೆಬರಹ
ಬದಲಾಗೋದು ಹೇಗೆ ಮಗನ ಹಣೆಬರಹ?
ಏ 'ಡಾಗ್' ಹೋಗಾಚೆ ಕಂದಮ್ಮನ ಅವಕಾಶದ ಅನ್ನ ಕಸಿಯಬೇಡ
ಅಮ್ಮ ಕೊಟ್ಟ ಏಟಿಗೆ ಶ್ವಾನ ಒಮ್ಮೆ ಕುಯ್ಗುಟ್ಟಿತು
'ಬೌ' ಎಂದು ಒಮ್ಮೆ ಮೈ ಜಾಡಿಸಿತು
ಬಾಲ ಅಲ್ಲಾಡಿಸಿ, ಆಟೋ ಗಾಲಿಗೆ ಮೂತ್ರಾಭಿಷೇಕ ಮಾಡಿ
ಒಂದು ಸುತ್ತು ಪ್ರದಕ್ಷಿಣೆ ಹಾಕಿ ಅಲ್ಲೇ ಮಲಗಿತು
ಅಮ್ಮನ ಭಾಷೆ ಬದಲಾದರೂ ನಾಯಿಯ ಭಾವ ಬದಲಾಗುತ್ತಾ..?
ಮಗುವಿನ ಮುಖದಲ್ಲಿ ಚಂದ್ರ ನಗುತ್ತಲೇ ಇದ್ದ..
ಅಮ್ಮನ ಕಣ್ಣು ಕರುಳಕುಡಿಯ ಭವಿಷ್ಯ ಅರಸುತ್ತಿತ್ತು..

No comments:

Post a Comment