Tuesday 17 May 2016

ಚಂದ್ರ ಅಂದು- ಇಂದು


ಭುವಿಗೆ ಬಿಟ್ಟ ಬೃಹತ್ ಬೀದಿದೀಪ
ಬೆಳದಿಂಗಳಾಗಿ ಕರಗಿ, ಹುಣ್ಣಿಮೆಗೊಮ್ಮೆ ಅರಳುವ
ಎಂದೂ ಬಾಡದ ಪ್ರಕೃತಿಯ ಪುಷ್ಪ!
ಮುಗಿಲ ಕೊಳದ ಕಮಲ...

ಉಚ್ಚ್ವಾಸ- ನಿಶ್ವಾಸಗಳ ಅಲೆಎಬ್ಬಿಸಿ
ತಂಪಿನಲೆ ವಿರಹದ ಉರಿಯನೆಬ್ಬಿಸುವ ಪ್ರೇಮಚಂದಿರ
ಹಸಿದವನ ಪಾಲಿಗೆ ಸಿಗದ ರೊಟ್ಟಿ
ನಿನ್ನ ತೋರದ ಅಮ್ಮನ ಕೈ ತುತ್ತು ಸಪ್ಪೆ ಸಪ್ಪೆ !

ಚಂದಿರನೇತಕೆ ಓಡುವನಮ್ಮಾ..?
ಮಗು ಕೇಳಿತು..
ತಲೆಗೆ ತಂಪು ತಂಪು ಕೂಲ್ ಕೂಲ್
ನವರತ್ನ ತೈಲ!
ನಾಲಿಗೆಗೆ ತರಹೇವಾರಿ ಕೂಲ್ಡ್ರಿಂಕ್ಸ್
ಆಧುನಿಕತೆ ಗ್ರಹಣ ಹಿಡಿವಾಗ
ಓಡದೆ ಇನ್ನೇನು ಮಾಡಲಯ್ಯಾ
ಚಂದ್ರ ನಕ್ಕು ನುಡಿದ..!

ಜಗಮಗಿಸುವ ಕಣ್ಣು ಕೋರೈಸುವ ಹಾಲೋಜನ್ ಬೆಳಕಿನಡಿ
ಅಂಕೆ ಮೀರುತ್ತಿದೆ ಜಾಗತಿಕ ತಾಪ
ಗಣಪ ಕೊಟ್ಟ ಶಾಪಕ್ಕಿಂತ ಭಯಾನಕ
ಹ್ಯಾಟ್ಸ್ಅಪ್ ಚಂದಿರ
ಬೆಳಕಿನ ಮಾಲಿನ್ಯದ ಕೂಪದಲ್ಲೂ
ಮುಗ್ಧ ನಗೆ ಚೆಲ್ಲುತಿರುವೆ ತಂಪು ಸೂಸಿ..

ಫೇಸ್ಬುಕ್ಕಿನ ಲೈಕಿನಲಿ..
ಟ್ವೀಟರ್ಗಳ ಫಾಲೋಆನ್ನಲ್ಲಿ..
ವಾಟ್ಸ್ಅಪ್ಗಳ ಅಬ್ಬರದಲ್ಲಿ..
ಸದ್ಧಿಲ್ಲದೆ ಕರಗುತಿರುವೆ.. ಮರುಗುತಿರುವೆ
ತಂತ್ರ-ಯಂತ್ರಗಳ ನಾಗಾಲೋಟದಲಿ..
ಹುಣ್ಣಿಮೆ-ಅಮಾವಾಸ್ಯೆಗಳ ವ್ಯತ್ಯಾಸವೇ
ತಿಳಿಯುತ್ತಿಲ್ಲ..!

1 comment:

  1. ಚಂದ್ರ ಅಂದು-ಇಂದು-ಎಂದೆಂದೂ ಹಾಗೆಯೇ ಮತ್ತು ಹಾಗೆಯೇ....

    ReplyDelete